ಬರೇಲಿ: ಬರೇಲಿಯ ಆಸ್ಪತ್ರೆಯೊಂದರಲ್ಲಿ 3 ವರ್ಷದ ಬಾಲಕನಿಗೆ ಸುನ್ನತಿ ಮಾಡಿದ ಪ್ರಕರಣವನ್ನು ಗಮನದಲ್ಲಿಟ್ಟುಕೊಂಡು, ಉಪಮುಖ್ಯಮಂತ್ರಿ ಬ್ರಜೇಶ್ ಪಾಠಕ್ ಸೂಚನೆ ಮೇರೆಗೆ ಎಂ ಖಾನ್ ಆಸ್ಪತ್ರೆಯ ಪರವಾನಗಿಯನ್ನು ರದ್ದುಗೊಳಿಸಲಾಗಿದೆ.
ಶನಿವಾರ ಈ ಬಗ್ಗೆ ಟ್ವೀಟ್ ಮಾಡಿರುವ ಉಪಮುಖ್ಯಮಂತ್ರಿ ಬ್ರಜೇಶ್ ಪಾಠಕ್, “ದೂರು ಸರಿಯಾಗಿದ್ದರೆ, ತಪ್ಪಿತಸ್ಥ ವೈದ್ಯರು ಮತ್ತು ಆಸ್ಪತ್ರೆಯ ಆಡಳಿತದ ವಿರುದ್ಧ ಎಫ್‌ಐಆರ್ ದಾಖಲಿಸಲು, ತಕ್ಷಣದಿಂದಲೇ ಜಾರಿಗೆ ಬರುವಂತೆ ಆಸ್ಪತ್ರೆಯ ನೋಂದಣಿಯನ್ನು ರದ್ದುಗೊಳಿಸಲು ಮತ್ತು ಸಂಪೂರ್ಣ ವರದಿಯನ್ನು ನೀಡಲು ಬರೇಲಿಯ ಸಿಎಂಒಗೆ ಆದೇಶ ನೀಡಲಾಗಿದೆ” ಎಂದು ಪಾಠಕ್ ಹೇಳಿದ್ದಾರೆ.
ಜೂನ್ 23ರಂದು ಸ್ಟೇಡಿಯಂ ರಸ್ತೆಯ ಎಂ ಖಾನ್ ಆಸ್ಪತ್ರೆಯಲ್ಲಿ ಮೂರು ವರ್ಷದ ಬಾಲಕನಿಗೆ ನಾಲಿಗೆ ಶಸ್ತ್ರಚಿಕಿತ್ಸೆ ಮಾಡುವ ಬದಲು ಸುನ್ನತಿ ಮಾಡಲಾಗಿತ್ತು. ಘಟನೆ ಬಳಿಕ ಸಂಬಂಧಿಕರು ಪೊಲೀಸರಿಗೆ ದೂರು ನೀಡಿದ್ದಾರೆ. ಘಟನೆ ಸಾರ್ವಜನಿಕವಾಗಿ ತಿಳಿಯುತ್ತಿದ್ದಂತೆಯೇ ಹಲವು ಹಿಂದೂ ಸಂಘಟನೆಗಳು ಸ್ಥಳಕ್ಕೆ ಆಗಮಿಸಿ ಸುನ್ನತಿ ವಿರೋಧಿಸಿ ಪ್ರತಿಭಟನೆ ನಡೆಸಿದರು.
ಘಟನೆ ಬಗ್ಗೆ ಮಾಹಿತಿ ಪಡೆದ ಉಪ ಮುಖ್ಯಮಂತ್ರಿ ಬ್ರಜೇಶ್ ಪಾಠಕ್, ಈ ಬಗ್ಗೆ ತನಿಖೆ ನಡೆಸಿ ಕ್ರಮ ಕೈಗೊಳ್ಳುವಂತೆ ಬರೇಲಿ ಮುಖ್ಯ ವೈದ್ಯಾಧಿಕಾರಿ ಡಾ.ಬಲ್ಬೀರ್ ಸಿಂಗ್ ಅವರಿಗೆ ಸೂಚಿಸಿದ್ದಾರೆ. ಈ ಬಗ್ಗೆ ಹೆಚ್ಚಿನ ತನಿಖೆ ನಡೆಯುತ್ತಿದೆ.