ಸುರತ್ಕಲ್: ಗುಂಡು ಹಾರಿಸಿಕೊಂಡು ಸಿಐಎಸ್‌ಎಫ್ ಭದ್ರತಾ ಸಿಬ್ಬಂದಿಯೋರ್ವರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಆ.22ರ ರವಿವಾರ ಮುಂಜಾನೆ ಪಣಂಬೂರು ಎನ್.ಎಂ.ಪಿ.ಟಿ. ಮುಖ್ಯ ಗೇಟ್ ಬಳಿ ನಡೆದಿದೆ.
ರಾಯಚೂರು ನಿವಾಸಿ, ಸಿಐಎಸ್‌ಎಫ್ ಪಿಎಸ್‌ಐ ಜಾಕೀರ್ ಹುಸೇನ್ (58) ತನ್ನ ಸೇವಾ ಆಯುಧದಿಂದ ಆತ್ಮಹತ್ಯೆ ಮಾಡಿಕೊಂಡವರು ಎಂದು ತಿಳಿದು ಬಂದಿದೆ.
ಜಾಕೀರ್ ಹುಸೇನ್ ಅವರನ್ನು ಎನ್.ಎಂ.ಪಿ.ಟಿ ಮುಖ್ಯ ಗೇಟ್‌ನಲ್ಲಿ ನೈಟ್ ಶಿಫ್ಟ್‌ನಲ್ಲಿ ನಿಯೋಜಿಸಲಾಗಿತ್ತು. ರಾತ್ರಿ ಪಾಳಿಯ ಕೆಲಸ ಮುಗಿಸಿ ಮುಂಜಾನೆ ಸುಮಾರು 6.30 ರ ಸಮಯಕ್ಕೆ ಮುಖ್ಯ ಗೇಟ್‌ನ ಪಕ್ಕದಲ್ಲಿರುವ ವಾಶ್‌ರೂಮ್‌ಗೆ ತೆರಳಿ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಪಣಂಬೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಕೈಗೊಳ್ಳಲಾಗಿದೆ. ಆತ್ಮಹತ್ಯೆ ನಿಖರ ಕಾರಣ ತಿಳಿದು ಬಂದಿಲ್ಲ. ಶವವನ್ನು ಪರೀಕ್ಷೆಗಾಗಿ ಆಸ್ಪತ್ರೆಗೆ ಸಾಗಿಸಲಾಗಿದೆ.