ಸಂತ ಆಗ್ನೆಸ್ ಕಾಲೇಜು (ಸ್ವಾಯತ್ತ),ಮಂಗಳೂರು ಇದರ ಸ್ನಾತಕೋತ್ತರ ಅಧ್ಯಯನ ಮತ್ತು ಸಂಶೋಧನಾ ಕೇಂದ್ರವು 2024ರ ಅಕ್ಟೋಬರ್ 10ರಂದು “ಕ್ರೆಶೆಂಡೋ” ಎಂಬ ಶೀರ್ಷಿಕೆಯ ಅಡಿಯಲ್ಲಿ ಸೆಮಿನಾರ್ ಹಾಲ್, ಸೆಂಟಿನರಿ ಬ್ಲಾಕ್ನಲ್ಲಿ 2022-2024 ಶೈಕ್ಷಣಿಕ ವರ್ಷದ ಎಂಬಿಎ, ಎಂಸಿಎ ವಿದ್ಯಾರ್ಥಿಗಳಿಗೆ ವಿದಾಯ ಸಮಾರಂಭವನ್ನು ಹಮ್ಮಿಕೊಂಡಿತ್ತು.
ಕಾಲೇಜಿನ ಪ್ರಾಂಶುಪಾಲೆ ಡಾ. ಸಿಸ್ಟರ್ ಎಂ. ವೆನಿಸ್ಸಾ ಎ.ಸಿ. ಅವರು ಬೀಳ್ಕೊಡುಗೆ ಭಾಷಣದಲ್ಲಿ -“ವಿದ್ಯಾರ್ಥಿಗಳ ಬದುಕಿನಲ್ಲಿ ಶಿಕ್ಷಣವು ಶಕ್ತಿಯುತ ಶಸ್ತ್ರಾಸ್ತ್ರವಿದ್ದಂತೆ. ಜೀವನಕ್ಕೆ ಸಂಬಂಧಿಸಿದ ಎಲ್ಲಾ ಪ್ರಶ್ನೆಗಳಿಗೆ ಉತ್ತರಿಸಲು ನೀವು ಪಡೆದ ಶಿಕ್ಷಣ ಸಹಾಯ ಮಾಡುತ್ತದೆ” ಎಂದು ಕರೆಯಿತ್ತರು. ಮಾತ್ರವಲ್ಲದೆ ಸ್ವತಂತ್ರವಾಗಿ, ಗೌರವದಿಂದ ಮತ್ತು ಜವಾಬ್ದಾರಿಗಳಿಂದ ಕೆಲಸಗಳನ್ನು ಕೈಗೊಳ್ಳಲು ಸಾಧ್ಯವಾಗುತ್ತದೆ. ವಿದ್ಯಾರ್ಥಿ ಬದುಕಿನ ಅಧ್ಯಾಯದ ಮುಕ್ತಾಯವು ಹೊಸ ಬದುಕಿನ ಆರಂಭದ ಉಲ್ಲಾಸ ಮತ್ತು ತೃಪ್ತಿಗೆ ಕಾರಣವಾಗುತ್ತದೆ ಎಂದರು. ಅವರ ಭವಿಷ್ಯದ ಜೀವನದ ಹೊಸ ಅಧ್ಯಾಯಕ್ಕೆ ಶುಭಾಶಯಗಳನ್ನು ಹೇಳಿದರು. ವಿದ್ಯಾರ್ಥಿಗಳಿಗೆ ತಮ್ಮನ್ನು ಸುತ್ತುವರಿದ ಜಗತ್ತನ್ನು ರೂಪಿಸುವ, ಪ್ರೇರೇಪಿಸುವ ಮತ್ತು ಬದಲಾಯಿಸುವ ಶಕ್ತಿಯನ್ನು ಹೊಂದಲು ಪ್ರೇರೇಪಿಸಿದರು.
ಎಂಬಿಎ ಮತ್ತು ಎಂಸಿಎ ವಿಭಾಗದ ಪ್ರಾಧ್ಯಾಪಕ ಪ್ರೊ. ಜೆರಾರ್ಡ್ ಡಿ’ಸೋಜಾ ಅವರು ವಿದ್ಯಾರ್ಥಿಗಳಿಗೆ ಶುಭಕೋರುತ್ತಾ , ಎಂಬಿಎ ಮತ್ತು ಎಂಸಿಎ ವಿದ್ಯಾರ್ಥಿಗಳು ಸಂತ ಆಗ್ನೆಸ್ ಕಾಲೇಜಿನಲ್ಲಿ ಕಲಿತ ತತ್ವಗಳನ್ನು ಶ್ರದ್ಧೆ ಮತ್ತು ನಂಬಿಕೆಯಿಂದ ತಮ್ಮ ವೃತ್ತಿ ಜೀವನದಲ್ಲಿ ಅಳವಡಿಸಿಕೊಳ್ಳಲು ಕರೆಯಿತ್ತರು. ಎಂಬಿಎ ಮತ್ತು ಎಂಸಿಎ ವಿದ್ಯಾರ್ಥಿ ಪ್ರತಿನಿಧಿಗಳು ತಮ್ಮ ಅಭಿಪ್ರಾಯ ಮತ್ತು ಅನುಭವಗಳನ್ನು ಹಂಚಿಕೊಂಡರು.
ಕಾಲೇಜಿನ ಪ್ರಾಂಶುಪಾಲೆ ಸಿಸ್ಟರ್ ಡಾ. ಎಂ. ವೆನಿಸ್ಸಾ ಎ.ಸಿ. ಅವರು ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಪ್ರತಿಜ್ಞಾವಿಧಿ ಬೋಧಿಸಿದರು. ಕಾರ್ಯಕ್ರಮದಲ್ಲಿ ಸ್ನಾತಕೋತ್ತರ ವಿಭಾಗದ ಕೋ-ಆರ್ಡಿನೇಟರ್ ಸಿಸ್ಟರ್ ಡಾ. ವಿನೋರಾ ಎ.ಸಿ., ಉಪ ಪ್ರಾಂಶುಪಾಲೆ ಸಿಸ್ಟರ್ ರೂಪಾ ರೊಡ್ರಿಗಸ್ ಎ.ಸಿ., ಎಂಬಿಎ ವಿಭಾಗದ ಮುಖ್ಯಸ್ಥೆ ಶೆರಿಲ್ ಪ್ರೀತಿಕಾ, ಎಂಸಿಎ ವಿಭಾಗದ ಮುಖ್ಯಸ್ಥೆ ಪಂಚಜನ್ಯೇಶ್ವರಿ, ಮತ್ತು ಎಂಬಿಎ ಮತ್ತು ಎಂಸಿಎ ವಿಭಾಗದ ಪ್ರಾಧ್ಯಾಪಕರು ಉಪಸ್ಥಿತರಿದ್ದರು.
ಎಂಬಿಎ ವಿದ್ಯಾರ್ಥಿ ಉಪಾಧ್ಯಕ್ಷ ವಿನ್ಸ್ಟನ್ ಜಾಯ್ ಮೆನೆಜಸ್ ಕಾರ್ಯಕ್ರಮ ನಿರೂಪಣೆ ಮಾಡಿದರು. ದಿಶಾ ಸ್ವಾಗತಿಸಿದರು. ಫಾಬಿಯನ್ ಡಿಸೋಜಾ ಧನ್ಯವಾದ ಸಮರ್ಪಣೆ ಮಾಡಿದರು.