ಕಾರ್ಕಳ : ಮಹಿಳೆ ವಿರುದ್ದ ಸುಳ್ಳು ಆರೋಪಕ್ಕೆ ಸಂಬಂಧಿಸಿದ ವ್ಯಾಜ್ಯದಲ್ಲಿ ಮಾನನಷ್ಟ ಪರಿಹಾರ ನೀಡುವಂತೆ ಕಾರ್ಕಳ ಹಿರಿಯ ಸಿವಿಲ್ ನ್ಯಾಯಾಧೀಶರ ನ್ಯಾಯಾಲಯವು ತೀರ್ಪು ನೀಡಿದೆ.
ಮಾಳ ಗ್ರಾಮದ ನಿವಾಸಿ ಚಂದ್ರಾವತಿ ಮತ್ತು ಅವರ ಗಂಡ ಮೋನಪ್ಪ ಗೌಡ ಎಂಬವರು ಮುಡಾರು ಗ್ರಾಮದ ಲಕ್ಷ್ಮೀ ಎಂಬವರ ಮನೆಯಲ್ಲಿ ಕೂಲಿ ಕೆಲಸ ಮಾಡುತ್ತಿದ್ದರು. ಲಕ್ಷ್ಮೀ ಅವರು ಕೆಲಸದವರು ತೋಟದಲ್ಲಿ ಅಡಿಕೆ ಕಳ್ಳತನ ಮಾಡಿದ್ದಾರೆ ಎಂದು ತನ್ನ ಮಗಳು ಆರತಿ ಅಶೋಕ್ ಮೂಲಕ ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಿಸಿದ್ದರು. ವಿಚಾರಣೆ ವೇಳೆ ದೂರಿನಲ್ಲಿ ಯಾವುದೇ ಸತ್ಯಾಂಶ ಇಲ್ಲ ಎಂಬ ಕಾರಣಕ್ಕೆ ಅಂದಿನ ಠಾಣಾಧಿಕಾರಿ ಪ್ರಕರಣ ಮುಕ್ತಾಯಗೊಳಿಸಿದ್ದರು. ಆದರೆ, ಲಕ್ಷ್ಮೀ ಮತ್ತು ಆಕೆಯ ಮಗಳು ಆರತಿ ಅಶೋಕ್ ನೀಡಿದ ಸುಳ್ಳು ದೂರಿನ ಪರಿಣಾಮ ನನ್ನ ಘನತೆಗೆ ಧಕ್ಕೆಯಾಗಿದೆ. ಅಲ್ಲದೆ ಇದರಿಂದಾಗಿ ಮಗಳ ಮದುವೆಗೂ ತೊಂದರೆಯಾಗಿದೆ ಎಂದು ತಮಗಾಗಿರುವ ಮಾನನಷ್ಟಕ್ಕೆ ಚಂದ್ರಾವತಿ ಹಿರಿಯ ಸಿವಿಲ್ ನ್ಯಾಯಾಧೀಶರ ನ್ಯಾಯಾಲಯದಲ್ಲಿ ಪರಿಹಾರ ಕೇಳಿ ವ್ಯಾಜ್ಯ ಸಲ್ಲಿಸಿದ್ದರು. ನ್ಯಾಯಾಲಯವು ವಿಚಾರಣೆ ನಡೆಸಿ, ಲಕ್ಷ್ಮೀ ಮತ್ತು ಆಕೆಯ ಮಗಳು ಆರತಿ ಆಶೋಕ್ 2 ತಿಂಗಳೊಳಗಾಗಿ ಚಂದ್ರಾವತಿಯವರಿಗೆ ಮಾನನಷ್ಟ ಪರಿಹಾರ ಹಾಗೂ ದಾವೆಯ ಖರ್ಚು ಸಹಿತ ಒಟ್ಟು 43,420 ರೂ. ಪರಿಹಾರ ನೀಡಬೇಕೆಂದು ಆದೇಶಿಸಿದೆ. ಚಂದ್ರಾವತಿ ಅವರ ಪರವಾಗಿ ನ್ಯಾಯವಾದಿ ರವೀಂದ್ರ ಮೊಯ್ಲಿ ಕಾರ್ಕಳ ವಾದಿಸಿದ್ದರು.