ಮಂಗಳೂರು: ವರ್ಷದ ಹಿಂದೆ ಮಂಗಳೂರಿನ ಕಂಕನಾಡಿಯ ನಾಗುರಿಯಲ್ಲಿ ಸಂಭವಿಸಿದ್ದ ಕುಕ್ಕರ್ ಬಾಂಬ್ ಸ್ಪೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಎನ್ಐಎ ವಿಶೇಷ ಕೋರ್ಟ್ ಗೆ ಆರೋಪ ಪಟ್ಟಿಯನ್ನು ಸಲ್ಲಿಸಿದೆ. ಅದರಲ್ಲಿ ಇದೊಂದು ಐಸಿಸ್ ಪ್ರೇರಿತ ದಾಳಿ ಎಂಬುದಾಗಿ ಹೇಳಲಾಗಿದೆ.
ಮಂಗಳೂರಿನ ಕದ್ರಿ ದೇವಸ್ಥಾನವೇ ಆರೋಪಿಗಳ ಟಾರ್ಗೆಟ್ ಆಗಿತ್ತು.
ಷರಿಯತ್ ಕಾನೂನಿಗೆ ಪ್ರಚಾರ ನೀಡುವ ಉದ್ದೇಶ ಆರೋಪಿಗಳಿಗೆ ಇತ್ತು. ದಾಳಿ ಬಳಿಕ ಐಸಿಸ್ ಸೇರುವ ಉದ್ದೇಶ ಬಂಧಿತರಿಗಿತ್ತು ಎಂದು ತನಿಖಾಧಿಕಾರಿಗಳು ಹೇಳಿಕೊಂಡಿದ್ದಾರೆ.
ನ.19, 2022ರಂದು ನಗರದಲ್ಲಿ ಕುಕ್ಕರ್ ಬಾಂಬ್ ಸ್ಪೋಟಗೊಂಡು ಇಡೀ ರಾಜ್ಯವನ್ನೇ ಬೆಚ್ಚಿ ಬೀಳುವಂತೆ ಮಾಡಿತ್ತು. ಮಂಗಳೂರಿನಲ್ಲಿ 2020ರಲ್ಲಿ ಕಂಡು ಬಂದ ಉಗ್ರ ಗೋಡೆ ಬರಹ ಪ್ರಕರಣದ ಹಾಗೂ ಶಿವಮೊಗ್ಗ ಟ್ರಯಲ್ ಬಾಂಬ್ ಪ್ರಕರಣದಲ್ಲಿ ಆರೋಪಿಯಾಗಿದ್ದ ಮಹಮ್ಮದ್ ಶಾರೀಕ್ ತಂದ ಕುಕ್ಕರ್ ಬಾಂಬ್ ಆಟೋರಿಕ್ಷಾದಲ್ಲಿ ಸ್ಪೋಟಗೊಂಡು ಆಸ್ಪತ್ರೆಗೆ ದಾಖಲಾಗಿದ್ದ.
ಕರ್ನಾಟಕದಲ್ಲಿ ಐಸಿಸ್ ಮಾದರಿ ಕೃತ್ಯಕ್ಕೆ ಸಂಚು ರೂಪಗೊಂಡಿದ್ದು, ಈ ಸ್ಪೋಟದಿಂದ ಬಯಲಾಗಿತ್ತು. ಈ ಘಟನೆಯಲ್ಲಿ ಆಟೋ ಚಾಲಕ ಪುರುಷೋತ್ತಮ ಕೂಡ ಗಾಯಗೊಂಡಿದ್ದರು. ಈ ತನಿಖೆ ನಡೆಸಿದ್ದಂತ ಎನ್ಐಎ ಆರೋಪಿ ಮಹಮ್ಮದ್ ಶಾರೀಕ್ ಹಾಗೂ ಸಯ್ಯದ್ ಯಾಸೀನ್ ವಿರುದ್ಧ ಈಗ ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಿದೆ.
ಎನ್ಐಎ ಸಲ್ಲಿಸಿರುವಂತ ಆರೋಪ ಪಟ್ಟಿಯಲ್ಲಿ ಶಂಕಿತ ಉಗ್ರರು ಕುಕ್ಕರ್ ನಲ್ಲಿ ಸುಧಾರಿತ ಸ್ಪೋಟಕ ಕೊಂಡೊಯ್ದು ಆಟೋದಲ್ಲಿ ತೆರಳಿ ಕದ್ರಿ ಮಂಜುನಾಥ ದೇವಸ್ಥಾನ ಸ್ಪೋಟಕ್ಕೆ ಸಂಚು ನಡೆಸಿದ್ದರು ಎಂಬುದಾಗಿ ಹೇಳಲಾಗಿದೆ.