ಪುತ್ತೂರು:ಬಲ್ನಾಡು ಉಜಿರುಪಾದೆಯಲ್ಲಿ ಸಾಲ ಮರುಪಾವ ತಿಗೆ ಸಂಬಂಧಿಸಿ ಮನೆಗೆ ತೆರಳಿದ್ದ ಬ್ಯಾಂಕ್ ಸಿಬಂದಿಗಳಿಗೆ ಪಿಸ್ತೂಲ್ ತೋರಿಸಿಬೆದರಿಕೆ ಒಡ್ಡಿದ ಪ್ರಕರಣಕ್ಕೆ ಸಂಬಂಧಿಸಿ ಪ್ರತಿದೂರು ದಾಖಲಾಗಿದ್ದು, ಬ್ಯಾಂಕ್ ಸಿಬಂದಿ ವಿರುದ್ಧ ಮನೆಯಲ್ಲಿದ್ದ ಮಹಿಳೆ ಮಾನಭಂಗಕ್ಕೆ ಯತ್ನಿಸಿರುವ ದೂರು ನೀಡಿದ್ದಾರೆ. ಕಾರಿನಲ್ಲಿ ಬಂದ ಅಪರಿಚಿತರು ಮನೆಯೊಳಗೆ ಅಕ್ರಮವಾಗಿ ಪ್ರವೇಶಿಸಿ ಸಾಲ ತೀರಿಸಲು ಸಾಧ್ಯವಿಲ್ಲದಿದ್ದರೆ ನಮ್ಮೊಂದಿಗೆ ಬನ್ನಿ ಎಂದು ಮಾನಭಂಗಕ್ಕೆ ಯತ್ನಿಸಿದ್ದಲ್ಲದೆ, ಈ ಬಗ್ಗೆ ದೂರು ನೀಡಿದರೆ ನೀವು ಪಿಸ್ತೂಲ್ ತೋರಿಸಿ ಬೆದರಿಸಿದ್ದೀರೆಂದು ನಿಮ್ಮ ವಿರುದ್ಧವೇ ದೂರು ನೀಡಿ ನಿಮ್ಮನ್ನು ಜೈಲಿಗೆ ಹಾಕಿಸುತ್ತೇವೆ ಎಂದು ಬೆದರಿಸಿರುವುದಾಗಿ ಮನೆಯಲ್ಲಿದ್ದ ಸಂತ್ರಸ್ತ ಮಹಿಳೆ ಬಲ್ನಾಡು ಉಜಿರುಪಾದೆ ನಿವಾಸಿ ಕೀರ್ತಿ ಅಖಿಲೇಶ್ ಅವರು ಮೂವರ ವಿರುದ್ದ ಪುತ್ತೂರು ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಸೆ. 25ರ ಅಪರಾಹ್ನ 3 ಗಂಟೆಗೆ ಮನೆಯಲ್ಲಿ ಮಹಿಳೆಯರು ಮಾತ್ರ ಇದ್ದ ಸಮಯದಲ್ಲಿ ಕಾರಿನಲ್ಲಿ ಬಂದ ಮೂವರು ಮನೆಯಂಗಳಕ್ಕೆ ಅಕ್ರಮವಾಗಿ ಪ್ರವೇಶಿಸಿದಲ್ಲದೆ ವಿಚಾರಿಸಿ ದಾಗ ತಮ್ಮ ಗುರುತು ಪರಿಚಯ ನೀಡದೆ ಅವ್ಯಾಚ್ಯ ಶಬ್ದಗಳಿಂದ ನಿಂದಿಸಿ ನಿಮ್ಮ ಮನೆಯನ್ನು ಜಪ್ತಿ ಮಾಡಿ ನಿಮ್ಮನ್ನು ಬೀದಿಗೆ ಎಳೆಯುತ್ತೇವೆ ಎಂದು ಹೆದರಿಸಿದ್ದಾರೆ. ಆರೋಪಿಗಳ ಪೈಕಿ ಚೈತನ್ಯ ಮತ್ತು ಆಕಾಶ್ ನನ್ನ ಕೈ ಹಿಡಿದು ಎಳೆದು ಮಾನಭಂಗಕ್ಕೆ ಯತ್ನಿಸಿದ್ದಾರೆ. ಈ ವೇಳೆ ಇನ್ನೋರ್ವಆರೋಪಿ ದಿವ್ಯಾಶ್ರೀ ಪ್ರಚೋದನೆ ನೀಡಿದ್ದಾರೆ ಎಂದು ಸಂತ್ರಸ್ತ ಮಹಿಳೆ ನೀಡಿದ ದೂರಿನಲ್ಲಿ ದಾಖಲಾಗಿದೆ. ಪುತ್ತೂರು ಗ್ರಾಮಾಂತರ ಠಾಣೆಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯತೀಶ್ ಭೇಟಿ ನೀಡಿದ್ದು, ಈ ವೇಳೆ ಮಾಧ್ಯಮದವರ ಜತೆಗೆ ಮಾತನಾಡಿ, ಘಟನೆಗೆ ಸಂಬಂಧಿಸಿ ಎರಡೂ ಕಡೆಯಿಂದ ದೂರು ದಾಖಲಾಗಿದೆ. ತನಿಖೆ ನಡೆಯುತ್ತಿದೆ ಎಂದರು.