ಕಾಪು: ಆಗಸ್ಟ್ ತಿಂಗಳಲ್ಲಿ ಆಗುಂಬೆಯಲ್ಲಿ ನಡೆದ ಅನೈತಿಕ ಪೊಲೀಸ್ ಗಿರಿಯ ವಿಡಿಯೋ ಇದೀಗ ವೈರಲ್ ಆಗಿದ್ದು, ಈ ಸಂಬಂಧ ಯುವತಿಯ ಸಹೋದರ ನೀಡಿರುವ ದೂರಿನಂತೆ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಾಪು ಪೊಲೀಸ್ ಠಾಣೆ ವ್ಯಾಪ್ತಿಯ ಕಾಲೇಜಿನ ವಿದ್ಯಾರ್ಥಿಗಳಿಬ್ಬರು ಒಂದು ತಿಂಗಳ ಹಿಂದೆ ಬೈಕ್ ನಲ್ಲಿ ಆಗುಂಬೆಯ ಫಾಲ್ಸ್ ಗೆ ತೆರಳಿದ್ದರು. ಅಲ್ಲಿಂದ ವಾಪಾಸ್ ಬರುತ್ತಿದ್ದ ವಿದ್ಯಾರ್ಥಿಗಳ ಬೈಕ್ ಅನ್ನು ತಡೆದ ಸ್ಥಳೀಯ ಸಂಘ ಪರಿವಾರದ ಕಾರ್ಯಕರ್ತರು ಅನೈತಿಕ ಪೊಲೀಸ್ ಗಿರಿ ನಡೆಸಿದ್ದಾರೆಂದು ದೂರಲಾಗಿದೆ. ಇದೇ ವೇಳೆ ಸಂಘ ಪರಿವಾರದ ಕಾರ್ಯಕರ್ತರು ವಿದ್ಯಾರ್ಥಿ, ವಿದ್ಯಾರ್ಥಿನಿಯ ವಿಡಿಯೋವನ್ನು ತಮ್ಮ ಮೊಬೈಲ್ ಗಳಲ್ಲಿ ಚಿತ್ರೀಕರಣ ಮಾಡಿದ್ದರು. ಇದೀಗ ಈ ವಿಡಿಯೋವನ್ನು ತಿಂಗಳ ಬಳಿಕ ಸಾಮಾಜಿಕ ಜಾಲತಾಣಗಳಲ್ಲಿ ಹರಿ ಬಿಟ್ಟಿದ್ದು ಸಾಕಷ್ಟು ವೈರಲ್ ಆಗುತ್ತಿದೆ. ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿನಿಯ ಸಹೋದರ ಕಾಪು ಪೊಲೀಸ್ ಠಾಣೆಗೆ ದೂರು ನೀಡಿದ್ದು ಅದರಂತೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಉಡುಪಿ ಎಸ್ಪಿ ತಿಳಿಸಿದ್ದಾರೆ.