ಉಡುಪಿ: ವ್ಯಕ್ತಿಯೋರ್ವರು ಸೊಸೈಟಿಯಲ್ಲಿ ಪಡೆದ ಸಾಲ ಮರುಪಾವತಿಸದೆ, ಸಾಲ ಸಂದಾಯದ ಬಗ್ಗೆ ನಕಲಿ ದಾಖಲೆ ಸೃಷ್ಟಿಸಿರುವ ಕುರಿತು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಜ್ಜರಕಾಡು ನೂತನ್ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯಲ್ಲಿ ರಿಯಾನತ್ ಬಾನು, ಮೊಹಮ್ಮದ್ ಹನೀಫ್, ನುಮಾನ್ ಅಜ್ಜರಕಾಡು ಶಾಖೆಯಲ್ಲಿ ಹ್ಯುಂಡೈ ವೆನ್ಯೂ ಕಾರನ್ನು ಅಡಮಾನವಿರಿಸಿ, ರಿಯಾನತ್ ಬಾನು ಹೆಸರಿನಲ್ಲಿ 8 ಲಕ್ಷ ರೂ. ಸಾಲ ಪಡೆದಿದ್ದರು. ಜಾಮೀನುದಾರಾಗಿ ಮೊಹಮ್ಮದ್ ಹನೀಫ್, ನುಮಾನ್ ಸಹಿ ಮಾಡಿದ್ದರು.
ಸಾಲದ ಅರ್ಜಿ, ಪ್ರಾಮಿಸರಿ ನೋಟ್ ಹಾಗೂ ಒಪ್ಪಿಗೆ ಪತ್ರ ಮತ್ತು ಇತರ ದಾಖಲಾತಿಗಳನ್ನು ಸೊಸೈಟಿಗೆ ಬರೆದುಕೊಟ್ಟು ಸಾಲ ಮರು ಪಾವತಿಸುವುದಾಗಿ ನಂಬಿಸಿ, ವಾಹನ ಸಾಲ ಪಡೆದು ಅನಂತರ ಸೊಸೈಟಿಗೆ ಸಾಲ ಮರುಪಾವತಿಸದೆ ಸೊಸೈಟಿಯವರು ಸಾಲ ಸಂದಾಯವಾಗಿರುವುದಾಗಿ ಪತ್ರ ನೀಡಿರುವಂತೆ ಮತ್ತು ನಮೂನೆ 35ಕ್ಕೆ ಸಹಿ ಹಾಕಿರುವಂತೆ ನಕಲಿ ಸಹಿ ಮತ್ತು ಸೀಲು ಹಾಕಿ ನಕಲಿ ದಾಖಲೆಗಳನ್ನು ಸೃಷ್ಟಿಸಿ, ಆ ನಕಲಿ ದಾಖಲೆಗಳು ನೈಜ್ಯವೆಂದು ನಂಬಿಸಿ ಆರ್‌ಟಿಒ ಕಚೇರಿಗೆ ಸಲ್ಲಿಸಿದ್ದರು.
ಈ ನಕಲಿ ದಾಖಲೆಗಳ ಆಧಾರದ ಮೇರೆಗೆ ಕಾರನ್ನು ಅಡಮಾನ ನಮೂದನ್ನು ಸರಿಪಡಿಸಿ, ಐಸಿಐಸಿ ಬ್ಯಾಂಕ್ ಮಂಗಳೂರು ಶಾಖೆಯಲ್ಲಿ ಇದೇ ವಾಹನವನ್ನು ಅಡಮಾನ ಇರಿಸಿ ಸಾಲ ಪಡೆದುಕೊಂಡಿದ್ದರು. ಸೊಸೈಟಿಯಲ್ಲಿ ಪಡೆದ ಸಾಲವನ್ನು ಮರುಪಾವತಿಸದೆ, ನಕಲಿ ದಾಖಲೆ ಸೃಷ್ಟಿಸಿ ಲೋಪ ಎಸಗಿದ ಬಗ್ಗೆ ಸೊಸೈಟಿ ಮ್ಯಾನೇಜರ್ ಗಣೇಶ್ ನೀಡಿದ ದೂರಿನಂತೆ ಪ್ರಕರಣ ದಾಖಲಾಗಿದೆ.