ಮಂಗಳೂರು: ಕ್ರೆಡಿಟ್ ಕಾರ್ಡ್ ಪಾಯಿಂಟ್ ನಗದೀಕರಣ ಮಾಡಿಕೊಡುವುದಾಗಿ ಹೇಳಿ ಒಟಿಪಿ ಪಡೆದು ವಂಚಿಸುವ ಖದೀಮರ ಬಗ್ಗೆ ಸೈಬರ್ ತಜ್ಞರು ಎಚ್ಚರಿಸಿದ್ದಾರೆ.
ಮಂಗಳೂರಿನ ವೈದ್ಯರೊಬ್ಬರು ಆಸ್ಪತ್ರೆಯಲ್ಲಿದ್ದಾಗ ಕರೆ ಮಾಡಿದ ಅಪರಿಚಿತ ವ್ಯಕ್ತಿಯೋರ್ವ ನಿಮ್ಮ ಕ್ರೆಡಿಟ್ ಕಾರ್ಡ್ ಪಾಯಿಂಟ್ ಗಳನ್ನು ಬಳಸಿಕೊಳ್ಳಲು ಇಂದು ಕೊನೆಯ ದಿನಾಂಕವಾಗಿದೆ. ಕೂಡಲೇ ಅದನ್ನು ನಗದೀಕರಣ ಮಾಡಿ ಇಲ್ಲವೆ ಗಿಫ್ಟ್ ಪಡೆದುಕೊಳ್ಳಿ ಎಂದು ಹೇಳಿದ್ದಾನೆ.
ಇದನ್ನು ನಂಬಿದ ವೈದ್ಯರು ಪಾಯಿಂಟ್ಸ್‌ಗಳನ್ನು ನಗದೀಕರಣ ಮಾಡಿಕೊಡುವಂತೆ ಹೇಳಿದ್ದಾರೆ. ಆಗ ಅಪರಿಚಿತ ವ್ಯಕ್ತಿ ತಾನು ಹಾಗೆಯೇ ಮಾಡುವುದಾಗಿ ಹೇಳಿದ್ದಾನೆ. ಬಳಿಕ ವೈದ್ಯರು ಅವರ ಮೊಬೈಲ್‌ಗೆ ಬಂದ ಒಟಿಪಿಯನ್ನು ಅಪರಿಚಿತ ವ್ಯಕ್ತಿಗೆ ತಿಳಿಸಿದ್ದಾರೆ. ಆ ಬಳಿಕ ವೈದ್ಯರ ಖಾತೆಗೆ ಯಾವುದೇ ಹಣ ಬಂದಿರಲಿಲ್ಲ. ಬದಲಾಗಿ ಹಂತ ಹಂತವಾಗಿ ವೈದ್ಯರ ಖಾತೆಯಿಂದಲೇ ಒಟ್ಟು 60,000 ರೂ. ಯಾವುದೋ ಖಾತೆಗೆ ವರ್ಗಾವಣೆಯಾಗಿದೆ.
ವಂಚನೆಗೊಳಗಾದವರಿಗೆ ಕರೆ ಮಾಡುವ ವ್ಯಕ್ತಿಗಳು ಹಣ ವಾಪಸ್ ಕೊಡಿಸುವುದಾಗಿ ಹೇಳಿ ವಂಚಿಸುವ ಪ್ರಕರಣಗಳು ಮತ್ತೆ ವರದಿಯಾಗುತ್ತಿವೆ. ಇಂತಹ ವಂಚಕರನ್ನು ಸೈಬರ್ ವಲ್ಚರ್ಸ್ ಎಂದು ಕರೆಯಲಾಗುತ್ತದೆ. ಈ ಬಗ್ಗೆಯೂ ಎಚ್ಚರ ವಹಿಸಬೇಕು. ಸೈಬರ್ ವಂಚಕರು ತಾವು ವಂಚಿಸಲು ಗುರಿಯಾಗಿರಿಸಿದ ವ್ಯಕ್ತಿ ಅಗತ್ಯ ತುರ್ತು ಕೆಲಸದಲ್ಲಿದ್ದಾಗಲೇ ಯಾಮಾರಿಸಲು ಯತ್ನಿಸುತ್ತಾರೆ ಎಂದು ಮಂಗಳೂರಿನ ಸೈಬರ್ ತಜ್ಞ ಡಾ| ಅನಂತ ಪ್ರಭು ಗುರುಪುರ ಅವರು ತಿಳಿಸಿದ್ದಾರೆ.