ಮಂಗಳೂರು: ಅಪರಿಚಿತನೋರ್ವನ ಮಾತು ನಂಬಿ ಕ್ರಿಪ್ಟೋ ಕರೆನ್ಸಿ ವ್ಯವಹಾರಕ್ಕೆ ಕೈಹಾಕಿ ಉಪ್ಪಿನಂಗಡಿ ಬಳಿಯ ಇಚ್ಲಂಪಾಡಿ ನಿವಾಸಿ ಯುವಕನೊಬ್ಬ ಒಂದು ಕೋಟಿ ರೂ ಗೂ ಅಧಿಕ ದುಡ್ಡು ಕಳಕೊಂಡಿದ್ದಾನೆ ಎಂದು ತಿಳಿಯಲಾಗಿದೆ
ಇಚ್ಲಂಪಾಡಿ ಗ್ರಾಮದ ಕೆಡೆಂಬೈಲು ಪುಲಿಕ್ಕಲ್ ನ 43 ವರ್ಷದ ವ್ಯಕ್ತಿ ಹಣ ಕಳಕೊಂಡವರು ಎಂದು ಮಾಹಿತಿ ತಿಳಿದು ಬಂದಿದೆ.
ಮೇ 25ರಂದು ಟೆಲಿಗ್ರಾಮ್ ನಲ್ಲಿ ಅಪರಿಚಿತನೊಬ್ಬ ಪರಿಚಯವಾಗಿದ್ದಾನೆ. ಆತ ಕ್ರಿಪ್ಟೋ ಕರೆನ್ಸಿಯಲ್ಲಿ ಹೂಡಿಕೆ ಮಾಡಿದರೆ ದುಪ್ಪಟ್ಟು ಲಾಭ ಬರುವುದಾಗಿ ನಂಬಿಸಿದ್ದಾನೆ. ಅದರಂತೆ, ಅಮೆರಿಕದ ಕ್ರಿಪ್ಟೋ ಕರೆನ್ಸಿಗೆ ಹಣ ಹೂಡಿಕೆ ಮಾಡಲು ಬಿನೇನ್ಸ್ ಆ್ಯಪ್ ಮತ್ತು ಡಿಫೈ ಆ್ಯಪ್ ಡೌನ್ಹೋಡ್ ಮಾಡುವಂತೆ ತಿಳಿಸಿದ್ದಾನೆ.
ಅಪರಿಚಿತ ಹೇಳಿದಂತೆ ವ್ಯಕ್ತಿ ತಮ್ಮ ಮೊಬೈಲ್ ನಲ್ಲಿ ಎರಡೂ ಆ್ಯಪ್ ಗಳನ್ನು ಡೌನ್ಫೋಡ್ ಮಾಡಿ, ಅಪರಿಚಿತನ ಸೂಚನೆಯಂತೆ ತನ್ನ ಬ್ಯಾಂಕ್ ಖಾತೆಗಳಿಂದ 1,05,79,711 ರೂ ಹಣ ವರ್ಗಾಯಿಸಿದ್ದಾರೆ. ಕ್ರಿಪ್ಟೋ ಕರೆನ್ಸಿಯಲ್ಲಿ ಟ್ರೇಡಿಂಗ್ ಮಾಡುವುದಕ್ಕಾಗಿ ಆ್ಯಪ್ ಖಾತೆಗಳಿಗೆ ಹಣ ವರ್ಗಾವಣೆ ಮಾಡಿದ್ದರು. ಆದರೆ, ಆ ಬಳಿಕ ಹಣ ಹಿಂತಿರುಗಿ ತೆಗೆಯಲಾಗದೇ ಇದ್ದಾಗ ಅವರಿಗೆ ತಾವು ಮೋಸ ಹೋಗಿರುವುದು ತಿಳಿದುಬಂದಿದೆ.
ಈ ಬಗ್ಗೆ ಮಂಗಳೂರಿನ ಸೆನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.ಪೊಲೀಸರು ತನಿಖೆ ನಡೆಸುತ್ತಿದ್ದಾರೆ.