ಮಂಗಳೂರು: ಕ್ರಿಪ್ಟೋ ಕರೆನ್ಸಿಯಲ್ಲಿ ಹೂಡಿಕೆ ಮಾಡಿದರೆ ಅಧಿಕ ಲಾಭಾಂಶ ನೀಡುವುದಾಗಿ ಹೇಳಿ ವ್ಯಕ್ತಿಯೋರ್ವರಿಗೆ 10 ಲಕ್ಷ ರೂ. ವಂಚಿಸಿದ ಘಟನೆ ಮಂಗಳೂರಿನಲ್ಲಿ ನಡೆದಿದೆ ದೂರುದಾರ 2023ರ ನವೆಂಬರ್ನಲ್ಲಿ ಓಶಿಯನ್ ಫೈನಾನ್ಸ್ ಅಕಾಡೆಮಿ ಎಂಬ ಕಂಪೆನಿಯ ವೆಬ್ಸೈಟ್ನಲ್ಲಿ ಕ್ರಿಫ್ಟೋ ಕರೆನ್ಸಿಯ ಬಗ್ಗೆ ಆನ್ಲೈನ್ನಲ್ಲಿ ತರಬೇತಿ ಪಡೆದಿದ್ದರು. ಬಳಿಕ ಕಂಪೆನಿಯವರು ದೂರುದಾರರ ಆಧಾರ್ ಕಾರ್ಡ್ ಮತ್ತು ಬ್ಯಾಂಕ್ ಖಾತೆ ಸಂಖ್ಯೆ ಪಡೆದುಕೊಂಡು Viyako.com ಎಂಬ ಕ್ರಿಪ್ಟೋ ಕರೆನ್ಸಿಯ ವೆಬ್ಸೈಟ್ Exchange centre ಅನ್ನು ಪರಿಚಯಿಸಿದರು. ಬಳಿಕ ಅಡ್ಡಿರ್ ಕಾದಿರ್ ಎಂದು ಪರಿಚಯಿಸಿಕೊಂಡ ವ್ಯಕ್ತಿಯೊಬ್ಬ ಆನ್ಲೈನ್ ಮೂಲಕ ಮೆಸೇಜ್ ಮಾಡಿ ಹಣ ಹೂಡುವಂತೆ ತಿಳಿಸಿದ್ದ. ಅದರಂತೆ ದೂರುದಾರರು 12,500 ರೂ.ಗಳನ್ನು ಹೂಡಿಕೆ ಮಾಡಿದ್ದರು. ಅದರ ಲಾಭಾಂಶವೆಂದು 46,000 ರೂ. ಗಳನ್ನು ದೂರುದಾರರ ಖಾತೆಗೆ ಕಳುಹಿಸಲಾಗಿತ್ತು. ಅನಂತರ ಆರೋಪಿಗಳು 2024ರ ಮೇ ತಿಂಗಳಲ್ಲಿ ಮೆಸೇಜ್ ಮಾಡಿ ಕ್ರಿಪ್ಟ್ ಕರೆನ್ಸಿಯಲ್ಲಿ ಒಳ್ಳೆಯ ಲಾಭವಿದೆ ಎಂದು ನಂಬಿಸಿ ಕಾಯಿನ್ ಖರೀದಿಸುವಂತೆ ತಿಳಿಸಿದರು. ಮೇ 13ರಂದು ಎರಡು ಕಾಯಿನ್ಗಳಿಗೆ ತಲಾ 5 ಲಕ್ಷ ರೂ.ಗಳಂತೆ ಒಟ್ಟು 10 ಲಕ್ಷ ರೂ.ಗಳನ್ನು ವರ್ಗಾಯಿಸಿಕೊಂಡಿದ್ದರು. ಆ ಬಳಿಕ ಯಾವುದೇ ಹಣ ವಾಪಸ್ ನೀಡದೆ ವಂಚಿಸಿದ್ದಾರೆ ಎಂದು ಸೆನ್ ಠಾಣೆಯಲ್ಲಿ ನೀಡಿರುವ ದೂರಿನಲ್ಲಿ ತಿಳಿಸಲಾಗಿದೆ.