ಮಂಗಳೂರು: ಎರಡು ವರ್ಷಗಳ ಹಿಂದೆ ಮಂಗಳೂರಿನಲ್ಲಿ ಸಂಭವಿಸಿದ ಕುಕ್ಕರ್ ಬಾಂಬ್ ಸ್ಫೋಟ ಹಾಗೂ ಶಿವಮೊಗ್ಗದಲ್ಲಿ ನಡೆದಿದ್ದ ಬಾಂಬ್ ಸ್ಫೋಟ ಟ್ರಯಲ್ ಪ್ರಕರಣದ ಶಂಕಿತ ಉಗ್ರರು ವಾರಾಣಸಿಯ ಮಹಿಳೆಯೊಬ್ಬರ ಹೆಸರಿನಲ್ಲಿ ಬೇನಾಮಿ ಬ್ಯಾಂಕ್ ಖಾತೆ ಹೊಂದಿ ಅದರ ಮೂಲಕವೇ ವಹಿವಾಟು ನಡೆಸುತ್ತಿದ್ದರು ಎಂಬ ಸಂಗತಿಯನ್ನು ರಾಷ್ಟ್ರೀಯ ತನಿಖಾ(ಎನ್‌ಐಎ) ಅಧಿಕಾರಿಗಳು ಪತ್ತೆ ಮಾಡಿದ್ದಾರೆ.
ಪ್ರಕರಣದಲ್ಲಿ ಬಂಧಿತ ಆರೋಪಿಗಳಾದ ಮಹಮ್ಮದ್ ಶಾರೀಕ್ ಮತ್ತು ಮಾಝ್ ಮುನೀರ್ ಅವರು ಮಂಗಳೂರನ್ನು ಕೇಂದ್ರೀಕರಿಸಿ ಬೆಂಗಳೂರು, ಮೈಸೂರು, ಶಿವಮೊಗ್ಗದಲ್ಲಿ ಓಡಾಟ ನಡೆಸುತ್ತಿದ್ದರು. ಆದರೆ ಅವರು ಸ್ವಂತ ಬ್ಯಾಂಕ್ ಖಾತೆ ಹೊಂದಿರಲಿಲ್ಲ. ಬೇರೆಯವರ ಹೆಸರಿನಲ್ಲಿದ್ದ ಬೇನಾಮಿ ಬ್ಯಾಂಕ್ ಖಾತೆಯನ್ನು ಮಾಝ್ ಮುನೀರ್ ನಿರ್ವಹಿಸುತ್ತಿದ್ದ. ಅದೇ ಹೆಸರಲ್ಲಿ ತನ್ನೆಲ್ಲ ಬ್ಯಾಂಕ್ ವಹಿವಾಟು ನಡೆಸುತ್ತಿದ್ದ.
ತನಿಖೆ ಸಂದರ್ಭದಲ್ಲಿ ಈ ಖಾತೆ ಉತ್ತರ ಪ್ರದೇಶದ ವಾರಾಣಸಿಯ ಮಹಿಳೆಯೊಬ್ಬರ ಹೆಸರಿನಲ್ಲಿರುವುದು ಪತ್ತೆಯಾಗಿದೆ. ಇನ್ನು ವಿದೇಶದಲ್ಲಿದ್ದ ಉಗ್ರನ ಸೂಚನೆಯಂತೆ ಮಂಗಳೂರಿನಲ್ಲಿ ಮಾಝ್ ಮುನೀರ್ ವಾಸವಿದ್ದ ಮನೆಗೆ ಈ ಬ್ಯಾಂಕ್ ಖಾತೆಯ ರುಪೇ ಕಾರ್ಡ್, ಎಟಿಎಂ ಕಾರ್ಡ್, ಬ್ಯಾಂಕ್ ಪುಸ್ತಕ, ಸಿಎಮ್ ಕೊರಿಯರ್ ಮೂಲಕ ಕಳುಹಿಸಲಾಗಿತ್ತು. ಈ ಡೆಬಿಟ್ ಕಾರ್ಡ್ ಹಾಗೂ ಸಿಮ್ ಗಳನ್ನು ಮಾಝ್ ಮುನೀರ್ ಮಂಗಳೂರಿನ ಕೋರ್ಟ್ ಆವರಣದಲ್ಲಿ ಆರೋಪಿ ಮೊಹಮ್ಮದ್ ಶಾರೀಕ್‌ಗೆ ತಲುಪಿಸಿದ್ದ ಎಂಬುದು ತನಿಖೆ ವೇಳೆ ತಿಳಿದುಬಂದಿದೆ.
ಕರ್ನಾಟಕದಲ್ಲಿ ಐಸಿಸ್ ನೆಟ್ ವರ್ಕ್ ಬಲಪಡಿಸಲು ವಿದೇಶದಿಂದ ಉಗ್ರರು ನೇರವಾಗಿ ಕ್ರಿಪ್ಲೋ ಕರೆನ್ಸಿ ಮೂಲಕ ಹಣಕಾಸು ನೆರವು ನೀಡುತ್ತಿದ್ದರು. ಅದನ್ನು ಬಳಸಿಕೊಂಡು ಮಾಝ್ ಮುನೀರ್ ಮತ್ತು ಮೊಹಮ್ಮದ್ ಶಾರೀಕ್ ಐಸಿಸ್ ನೆಟ್ವರ್ಕ್ ಜತೆಗೆ ಸಂಪರ್ಕ ಹೊಂದಿ ಉಗ್ರವಾದಿ ಕೃತ್ಯಗಳನ್ನು ನಡೆಸುತ್ತಿದ್ದ ಎಂಬುದು ತಿಳಿದು ಬಂದಿದೆ.