ಉಡುಪಿ: ವಿದೇಶಿ ಕರೆನ್ಸಿ ವಿನಿಮಯದ ನೆಪದಲ್ಲಿ ಹಲವು ವ್ಯಕ್ತಿಗಳಿಗೆ ವಂಚನೆ ಮಾಡಿದ ಅಂತರರಾಜ್ಯ ಖದೀಮರನ್ನು ಉಡುಪಿ ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ಮೂಲದ, ಉತ್ತರ ಪ್ರದೇಶದಲ್ಲಿ ನೆಲಿಸಿದ್ದ ಮೊಹಮ್ಮದ್ ಪೋಲಾಶ್ ಖಾನ್ (42), ಮುಂಬೈ ಮೂಲದ, ಮಹಮ್ಮದ್ ಮಹತಾಬ್ ಬಿಲ್ಲಾಲ್ ಶೇಕ್ (43), ಪಶ್ಚಿಮ ಬಂಗಾಳದ ಮಹಮ್ಮದ್ ಫಿರೋಜ್ (30), ದೆಹಲಿಯಲ್ಲಿ ವಾಸವಾಗಿರುವ ನೂರ್ ಮಹಮ್ಮದ್ (36) ಹರಿಯಾಣದ ಮೀರಜ್ ಮತ್ತು ದೆಹಲಿ ಮೂಲದ ಮೊಹಮ್ಮದ್ ಜಹಾಂಗೀರಾ (60) ಎಂದು ಗುರುತಿಸಲಾಗಿದೆ.
ಆರೋಪಿಗಳು ಕರೆನ್ಸಿ ವಿನಿಮಯದಲ್ಲಿ ಕಡಿಮೆ ಬೆಲೆಗೆ ಯುಎಇ ದಿರ್ಹಾಮ್ ನೀಡುವುದಾಗಿ ಹೇಳಿ ವಂಚಿಸುತ್ತಿದ್ದ ಆರೋಪಿಗಳ ವಿರುದ್ಧ ಬ್ರಹ್ಮಾವರ ಮತ್ತು ಕೋಟ ಪೊಲೀಸ್ ಠಾಣೆಗಳಲ್ಲಿ ವಂಚನೆಗೆ ಒಳಗಾದವರು ದೂರು ದಾಖಲಿಸಿದ್ದರು. ಈ ಪ್ರಕರಣವನ್ನು ಭೇದಿಸಲು ಉಡುಪಿ ಎಸ್ಪಿ ಅಕ್ಷಯ ಎಂ.ಹೆಚ್ ವಿಶೇಷ ತಂಡ ರಚಿಸಿದ್ದರು. ಆರೋಪಿಗಳು ಕಡಿಮೆ ದರದಲ್ಲಿ ಭಾರತೀಯ ಕರೆನ್ಸಿಗೆ ಬದಲಾಗಿ ಯುಎಇ ದಿರ್ಹಾಮ್‌ಗಳನ್ನು ನೀಡುವ ಮೂಲಕ ಸಂತ್ರಸ್ತರನ್ನು ಮೊದಲು ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಾರೆ. ನಂತರ, ಸಂತ್ರಸ್ತರಿಗೆ ತಮ್ಮ ಬಳಿ ಹೆಚ್ಚು ವಿದೇಶಿ ಕರೆನ್ಸಿ ಇದೆ ಎಂದು ಮನದಟ್ಟು ಮಾಡುತ್ತಿದ್ದರು. ನಂತರ, ಆರೋಪಿಗಳು ಹಣ ಬದಲಾಯಿಸಿಕೊಳ್ಳಲು, ಸ್ಥಳ ನಿಗದಿ ಮಾಡುತ್ತಿದ್ದರು. ಹಣ ಬದಲಾಯಿಸಿಕೊಳ್ಳಲು ಸ್ಥಳಕ್ಕೆ ಬಂದ ಸಂತ್ರಸ್ತರಿಗೆ ದಿರಾಹಮ್‌ಗಳ ಬದಲಿಗೆ ಬಟ್ಟೆಯಲ್ಲಿ ಸುತ್ತಿದ ಸಾಬೂನಿನ ಪ್ಯಾಕೆಟ್ನ್ನು ನೀಡುತ್ತಿದ್ದರು. ಸಂತ್ರಸ್ತರು ಆರೋಪಿ ನೀಡಿದ ವಿದೇಶಿ ಕರೆನ್ಸಿ ನೋಟುಗಳಿರುವ ಬ್ಯಾಗ್ನ್ನು ಪರಿಶೀಲಿಸುವ ಮೊದಲೇ ಆರೋಪಿಗಳು ಹಣವನ್ನು ಕಸಿದುಕೊಂಡು ಸ್ಥಳದಿಂದ ಪರಾರಿಯಾಗುತ್ತಿದ್ದರು ಎಂದು ಎಸ್ಪಿ ಎಸ್ಪಿ ಅಕ್ಷಯ ಎಂ.ಹೆಚ್ ಹೇಳಿದ್ದಾರೆ.
ಆರೋಪಿಗಳ ವಿರುದ್ಧ ದೆಹಲಿ ಮತ್ತು ದಾವಣಗೆರೆಯಲ್ಲಿ ಪ್ರಕರಣ ದಾಖಲಾಗಿದೆ. ಹಾಸನ, ಚಿತ್ರದುರ್ಗ ಮತ್ತು ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಇದೇ ರೀತಿಯ ಅಪರಾಧ ಎಸಗಿದ್ದಾರೆ ಎಂದು ಎಸ್ಪಿ ಅಕ್ಷಯ್ ಹೇಳಿದ್ದಾರೆ. ಆರೋಪಿಗಳನ್ನು ಮಾರ್ಚ್ 31 ರಂದು ಬಂಧಿಸಲಾಯಿತು ಮತ್ತು ಅವರನ್ನು ಕಸ್ಟಡಿಗೆ ಪಡೆದ ನಂತರ ಪೊಲೀಸರು 100 ದಿರ್ಹಮ್ ಮೌಲ್ಯದ 32 ವಿದೇಶಿ ಕರೆನ್ಸಿ ನೋಟುಗಳು, 19 ಮೊಬೈಲ್ ಫೋನ್‌ಗಳು, 6.29 ಲಕ್ಷ ರೂ. ಹಣ, ಮೂರು ಮೋಟಾರ್‌ಸೈಕಲ್‌ಗಳು ಮತ್ತು 30 ಸಿಮ್ ಕಾರ್ಡ್‌ಗಳನ್ನು ವಶಪಡಿಸಿಕೊಂಡಿದ್ದಾರೆ.