ಬೆಂಗಳೂರು : ಮುಂಗಾರು ಪೂರ್ವ ಮಳೆ ಅಬ್ಬರದ ನಡುವೆ ಇದೀಗ ಅರಬ್ಬಿ ಸಮುದ್ರದಲ್ಲಿ ಚಂಡಮಾರುತವೇಳುವ ಸಾಧ್ಯತೆ ಇದ್ದು ಮೇ 26ರ ಮಧ್ಯಾಹ್ನದೊಳಗೆ ಅದು ಕರ್ನಾಟಕ ರಾಜ್ಯವನ್ನು ಪ್ರವೇಶಿಸಲಿದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ಪ್ರಕೋಪ ನಿರ್ವಹಣಾ ಕೇಂದ್ರ (ಕೆಎಸ್ಎನ್ ಡಿಎಂಸಿ) ಹೇಳಿದೆ.
ಈ ಕುರಿತಂತೆ ಟ್ವೀಟ್ ಮಾಡಿರುವ ಕೆಎಸ್ಎನ್ ಡಿಎಂಸಿ, “ಕರ್ನಾಟಕ, ಗೋವಾ, ಕರಾವಳಿಯ ಸಮೀಪದಲ್ಲಿ ಚಂಡಮಾರುತ ಚಲಾವಣೆಯಾಗುವ ಸಾಧ್ಯತೆಯಿದ್ದು ಮುಂದಿನ 48 ಗಂಟೆಗಳಲ್ಲಿ ಗೋವಾ ಮತ್ತು ಕರ್ನಾಟಕದಲ್ಲಿ ಭಾರಿ ಮಳೆಯಾಗುವ ಸಾಧ್ಯತೆಯಿದೆ’’ ಎಂದು ತಿಳಿಸಿದೆ.
ಚಂಡಮಾರುತದ ಪರಿಚಲನೆಯು ದಕ್ಷಿಣ ಕೇರಳದ ಮೇಲೆ ಕೆಳ ಮತ್ತು ಮಧ್ಯಮ ಉಷ್ಣವಲಯದ ಮಟ್ಟದಲ್ಲಿದೆ. ಅದರ ಪ್ರಭಾವದ ಅಡಿಯಲ್ಲಿ ಮುಂದಿನ 5 ದಿನಗಳಲ್ಲಿ (ಮೇ 24ರಿಂದ 28ರವರೆಗೆ) ಗುಡುಗು, ಮಿಂಚು ಮತ್ತು ಬಿರುಗಾಳಿಯು ಗಂಟೆಗೆ 30ರಿಂದ 40 ಕಿ.ಮೀ.ವೇಗದಲ್ಲಿ ಸಾಗುತ್ತಿದೆ. ಅದರ ಪರಿಣಾಮವಾಗಿ, ಕರಾವಳಿ ಮತ್ತು ದಕ್ಷಿಣ ಒಳನಾಡು ಜಿಲ್ಲೆಗಳಲ್ಲಿ ವ್ಯಾಪಕವಾಗಿ ಸಾಧಾರಣ ಮಳೆಯಿಂದ ಭಾರೀ ಮಳೆಯಾಗುವ ಸಾಧ್ಯತೆಗಳಿವೆ ಎಂದು ಕೇಂದ್ರವು ಪ್ರಕಟಿಸಿದೆ. ಈಗಾಗಲೇ ಮೀನುಗಾರರಿಗೆ ಸಮುದ್ರಕ್ಕೆ ಇಳಿಯದಂತೆ ಎಚ್ಚರಿಕೆಯನ್ನು ನೀಡಲಾಗಿದೆ.