ಘಾಜಿಯಾಬಾದ್ : ಉತ್ತರ ಪ್ರದೇಶದ ಗಾಜಿಯಾಬಾದ್ ಜಿಲ್ಲೆಯಲ್ಲಿ ಪತ್ನಿಯೊಂದಿಗೆ ಜಗಳವಾಡಿದ ಬಳಿಕ ವ್ಯಕ್ತಿಯೊಬ್ಬ ಮನೆಗೆ ಬೆಂಕಿ ಹಚ್ಚಿದ ಘಟನೆ ನಡೆದಿದೆ. ಮನೆಯಲ್ಲಿದ್ದವರಿಗೆ ಏನಾಗ್ತಿದೆ ಎಂದು ಅರ್ಥವಾಗುವಷ್ಟರಲ್ಲಿ ಬೆಂಕಿ ದೈತ್ಯ ರೂಪ ಪಡೆದಿದೆ.
ಅಪಘಾತದಲ್ಲಿ 10 ಜನರಿಗೆ ಸುಟ್ಟ ಗಾಯಾಗಳಾಗಿದ್ದು, ಸುತ್ತಮುತ್ತಲಿನವರು ಪೊಲೀಸ್ ಹಾಗೂ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದಾರೆ. ಮಾಹಿತಿ ಪಡೆದ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿಯನ್ನ ನಿಯಂತ್ರಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅದೇ ಸಮಯದಲ್ಲಿ, ಪೊಲೀಸ್ ತಂಡದ ಸಹಾಯದಿಂದ, ಗಾಯಾಳುಗಳನ್ನ ಆಸ್ಪತ್ರೆಗೆ ದಾಖಲಿಸಲಾಯಿತು, ಅಲ್ಲಿ ಅವರು ಚಿಕಿತ್ಸೆ ಪಡೆಯುತ್ತಿದ್ದಾರೆ.
ಪೊಲೀಸರ ಪ್ರಕಾರ, ನಿನ್ನೆ ತಡರಾತ್ರಿ ಲೋಣಿ ಪ್ರದೇಶದ ತಿಲಕ್ ನಗರ ಕಾಲೋನಿಯಲ್ಲಿ ಸುರೇಶ್ (40) ಎಂಬುವರ ಪತ್ನಿ ರಿತು (36) ಅವರೊಂದಿಗೆ ಜಗಳವಾಡಿದ್ದಾರೆ. ಸುರೇಶ್ ತನ್ನ ಪತ್ನಿಯನ್ನ ಕೊಲ್ಲುವುದಾಗಿ ಬೆದರಿಕೆ ಹಾಕಿದ್ದು, ಕೋಪದ ಭರದಲ್ಲಿ ಸ್ಟವ್ನಿಂದ ಎಲ್ಪಿಜಿ ಗ್ಯಾಸ್ ಪೈಪ್ ಎಳೆದಿದ್ದಾನೆ, ಅದು ಕೊಠಡಿಯಲ್ಲಿ ಗ್ಯಾಸ್ ತುಂಬಿವಂತೆ ಮಾಡಿತ್ತು.
ಗ್ಯಾಸ್ ಲೈಟರ್ ಹೊತ್ತಿಸಿದ್ದೇ ಬೆಂಕಿ ಹೊತ್ತಿಕೊಂಡಿತು.!
ಕೊಠಡಿಗೆ ಗ್ಯಾಸ್ ತುಂಬಿಸುವಾಗ, ರಿತು ಸಹಾಯಕ್ಕಾಗಿ ಕೂಗಿದ್ದು, ನಂತ್ರ ಇತರ ಕುಟುಂಬ ಸದಸ್ಯರು ಅಲ್ಲಿಗೆ ತಲುಪಿ ಗ್ಯಾಸ್ ರೆಗ್ಯುಲೇಟರ್ ಸ್ವಿಚ್ ಆಫ್ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಇದೇ ವೇಳೆ ಸುರೇಶ್ ಗ್ಯಾಸ್ ಲೈಟರ್ ಹೊತ್ತಿಸಿದ್ದು, ಇದರಿಂದ ಕೊಠಡಿಗೆ ಬೆಂಕಿ ಹೊತ್ತಿಕೊಂಡು ಗೃಹೋಪಯೋಗಿ ವಸ್ತುಗಳು ಸುಟ್ಟು ಕರಕಲಾಗಿವೆ.
ಸುರೇಶ್, ಆತನ ಪತ್ನಿ ರಿತು ಮತ್ತು ಕುಟುಂಬ ಮತ್ತು ನೆರೆಹೊರೆಯ 10 ಜನರಿಗೆ ಬೆಂಕಿಯಿಂದ ಸುಟ್ಟ ಗಾಯಾಗಳಾಗಿವೆ ಎಂದು ಉಪ ಪೊಲೀಸ್ ಆಯುಕ್ತ (ಗ್ರಾಮೀಣ) ರವಿಕುಮಾರ್ ತಿಳಿಸಿದ್ದಾರೆ. ಎಲ್ಲಾ ಗಾಯಾಳುಗಳನ್ನ ಈಶಾನ್ಯ ದೆಹಲಿಯ ಜಿಟಿಬಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಅವರು ಹೇಳಿದರು.