ಥಾಣೆ: ಆಟವಾಡುವಾಗ ಗಾಯಗೊಂಡ ಶಾಲಾ ಬಾಲಕಿಯ ನೆರವಿಗೆ ಬಂದ ಅಮೆಜಾನ್ ಡೆಲಿವರಿ ಬಾಯ್ ಒಬ್ಬರ ಕೆಲಸಕ್ಕೆ ನೆಟ್ಟಿಗರಿಂದ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.
ಅಮೆಜಾನ್ ಡೆಲಿವರಿ ಬಾಯ್ ರವಿ ಎಂಬಾತನೇ ಮಾನವೀಯ ಕೆಲಸಕ್ಕಾಗಿ ಶ್ಲಾಘನೆಗೆ ಒಳಪಟ್ಟಾತ. ಮಹಾರಾಷ್ಟ್ರದ ಥಾಣೆಯ ಶಾಲೆಯೊಂದರ ವಿದ್ಯಾರ್ಥಿನಿ ಆಟವಾಡುತ್ತಿದ್ದಾಗ ಕಬ್ಬಿಣದ ಗೇಟ್ ಸಡಿಲಗೊಂಡು ಆಕೆಯ ಕೆನ್ನೆಯ ಮೂಲಕ ಗೇಟ್‌ನ ಒಂದು ಭಾಗ ಚುಚ್ಚಿಕೊಂಡಿತ್ತು. ಅದೇ ಮಾರ್ಗವಾಗಿ ತೆರಳುತ್ತಿದ್ದ ಡೆಲಿವರಿ ಬಾಯ್ ಇದನ್ನು ನೋಡಿ ತತ್‌ಕ್ಷಣ ಬಾಲಕಿ ಬಳಿಗೆ ಆಗಮಿಸಿ ಲೋಹದ ತುಂಡನ್ನು ಹಿಡಿದು ಆಕೆಗೆ ಹೆಚ್ಚಿನ ರಕ್ತಸ್ರಾವ ಆಗದಂತೆ ತಡೆದರು. ವೈದ್ಯರು ಸ್ಥಳಕ್ಕೆ ಆಗಮಿಸುವವರೆಗೂ ಡೆಲಿವರಿ ಬಾಯ್ ಈ ಸಾಹಸ ಮೆರೆದರು.
ಬಳಿಕ ಸಮೀಪದ ವಸಂತ ವಿಹಾರ್ ಆಸ್ಪತ್ರೆಯ ವೈದ್ಯಕೀಯ ತಂಡ ಆಗಮಿಸಿ ಗೇಟ್‌ನ ಒಂದು ಭಾಗವನ್ನೇ ಕತ್ತರಿಸಿ ಬಾಲಕಿಯನ್ನು ರಕ್ಷಿಸಿದರು. ಆನಂತರ ಬಾಲಕಿಯನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ಸಾಗಿಸಲಾಯಿತು. ರವಿ ಅವರು ಮಾಡಿದ ಈ ಮಾನವೀಯ ಕಾರ್ಯದ ವೀಡಿಯೋವನ್ನು ಸಾಲುಂಕೆ ಎಂಬವರು ಸಾಮಾಜಿಕ ತಾಣದಲ್ಲಿ ಹಂಚಿಕೊಂಡಿದ್ದು, ಇದನ್ನು ಹಲವಾರು ಮಂದಿ ಶೇರ್ ಮಾಡಿಕೊಂಡಿದ್ದಾರೆ. ಅಲ್ಲದೆ ಸಾಕಷ್ಟು ಮಂದಿ ರವಿಯವರಿಗೆ ಮೆಚ್ಚುಗೆ ಸೂಚಿಸಿದ್ದಾರೆ.