ಉಜಿರೆ: ವಿವಿಧತೆಯಲ್ಲಿ ಏಕತೆಯನ್ನು ಸಾಧಿಸಿರುವ ಭಾರತದ ಸರ್ವಧರ್ಮಗಳೂ ಸತ್ಯ, ಅಹಿಂಸೆ, ಪರೋಪಕಾರ, ಸೇವೆ, ಅನುಕಂಪ ಮೊದಲಾದ ಮಾನವೀಯ ಮೌಲ್ಯಗಳಿಗೆ ಒತ್ತು ನೀಡಿ ವಿಶ್ವವೇ ಒಂದು ಕುಟುಂಬ ಎಂದು ಭಾವಿಸುವ ವಿಶಾಲ ಮನೋಭಾವ ನಮ್ಮದಾಗಿದೆ. ನಮ್ಮ ಧರ್ಮವನ್ನು ಪ್ರೀತಿಸಿ ಅನುಷ್ಠಾನಗೊಳಿಸುವದರೊಂದಿಗೆ ಇತರರ ಧರ್ಮವನ್ನೂ ಗೌರವಿಸುವುದು ನಮ್ಮ ಸನಾತನ ಧರ್ಮ ಮತ್ತು ಸಂಸ್ಕೃತಿಯ ಜೀವಾಳವಾಗಿದೆ. ಮಾನವ ಸೇವೆಯೇ ಶ್ರೇಷ್ಠ ಧರ್ಮ ಎಂದು ಸಚಿವ ಡಾ. ಎಂ.ಬಿ. ಪಾಟೀಲ್ ಹೇಳಿದರು.
ಅವರು ಮಂಗಳವಾರ ಧರ್ಮಸ್ಥಳದಲ್ಲಿ ಲಕ್ಷದೀಪೋತ್ಸವ ಸಂದರ್ಭದಲ್ಲಿ ಆಯೋಜಿಸಿದ ಸರ್ವಧರ್ಮ ಸಮ್ಮೇಳನದ ತೊಂಭತ್ತಮೂರನೆ ಅಧಿವೇಶನವನ್ನು ಉದ್ಘಾಟಿಸಿ ಮಾತನಾಡಿದರು.
ಸರ್ವಧರ್ಮ ಸಮನ್ವಯ ಕೇಂದ್ರವಾಗಿ ಸರ್ವಧರ್ಮೀಯರಿಗೂ ಸೇವೆ ನೀಡುವ ಧರ್ಮಸ್ಥಳ ಅನುಪಮ ಶ್ರದ್ಧಾ-ಭಕ್ತಿಯ ಕೇಂದ್ರವಾಗಿದೆ. ಇಲ್ಲಿನ ಧರ್ಮಸಹಿಷ್ಣುತೆ, ಚತುರ್ವಿದ ದಾನ ಪರಂಪರೆ, ಮಾನವೀಯ ಸೇವೆ ಇಡೀ ವಿಶ್ವಕ್ಕೆ ಮಾದರಿಯಾಗಿದೆ. ಮಾನವ ಸೇವೆಯೇ ಶ್ರೇಷ್ಠ ಧರ್ಮವಾಗಿದ್ದು ಲಕ್ಷದೀಪೋತ್ಸವ ಪ್ರತಿ ಮನೆಯಲ್ಲಿಯೂ, ಪ್ರತಿಯೊಬ್ಬರ ಮನದಲ್ಲಿಯೂ ವಿಶ್ವಸಾಮರಸ್ಯದ ಬೆಸುಗೆಯನ್ನು ಬೆಸೆಯಲಿ. ಪರಸ್ಪರ ಪ್ರೀತಿ-ವಿಶ್ವಾಸದೊಂದಿಗೆ ಶಾಂತಿ, ಸಾಮರಸ್ಯದ ಸೌಹಾರ್ದಯುತ ಬದುಕಿಗೆ ಲಕ್ಷದೀಪೋತ್ಸವ ನಾಂದಿಯಾಗಲಿ. ಲಕ್ಷದೀಪೋತ್ಸವದ ಹೊಂಬೆಳಕಿನಲ್ಲಿ ನೈತಿಕತೆ, ಸೇವೆ ಜೀವನ ಮೌಲ್ಯಗಳು ನಿರಂತರ ನಂದಾದೀಪವಾಗಿ ಸರ್ವರ ಸಾರ್ಥಕ ಬದುಕಿಗೆ ದಾರಿದೀಪವಾಗಲಿ ಎಂದು ಅವರು ಹಾರೈಸಿದರು.




