ಬಂಟ್ವಾಳ: ಇಲ್ಲಿನ ಶ್ರೀ ಷಣ್ಮುಖ ಸುಬ್ರಹ್ಮಣ್ಯ ದೇವಸ್ಥಾನದ ಸಮೀಪ ನೇತ್ರಾವತಿ ನದಿಗೆ ಬಿದ್ದು ಯುವಕನೋರ್ವ ಮೃತಪಟ್ಟಿರುವ ಘಟನೆ ನಡೆದಿದೆ. ಬೆಳ್ತಂಗಡಿ ತಾಲೂಕಿನ ನಡ ಗ್ರಾಮದ ಮಂಜೊಟ್ಟಿ ನಿವಾಸಿ ಲೋಹಿತಾಕ್ಷ (28) ಮೃತಪಟ್ಟ ಯುವಕ. ಲೋಹಿತಾಶ್ವ ಅವರು ಸ್ನೇಹಿತರಾದ ವಿನ್ಸೆಂಟ್, ಮ್ಯಾಕ್ಸಿಂ, ಪ್ರಮೋದ್, ದಯಾನಂದ ಅವರಿಂದಿಗೆ ಕಾರ್‌ನಲ್ಲಿ ಶಂಭೂರಿಗೆ ಹೋಗಿದ್ದರು. ಈ ವೇಳೆ ಸ್ನೇಹಿತರು ಸ್ನಾನಕ್ಕೆಂದು ನದಿಗೆ ಇಳಿದಿದ್ದರೂ ಲೋಹಿತಾಕ್ಷ ಅವರು ದಡದಲ್ಲಿ ಕುಳಿತಿದ್ದರು. ಅದರೆ ಸ್ನೇಹಿತರು ಸ್ನಾನ ಮಾಡಿ ಹಿಂದಿರುಗಿದ ವೇಳೆ ಅವರು ನೀರಿನಲ್ಲಿ ಬಿದ್ದಿದ್ದಾರೆ ಎನ್ನಲಾಗುತ್ತಿದೆ. ನದಿ ದಡದಲ್ಲಿ ಕುಳಿತಿದ್ದ ಅವರ ಆರೋಗ್ಯದಲ್ಲಿ ತೊಂದರೆ ಉಂಟಾಗಿ ತಲೆ ತಿರುಗಿ ಬಿದ್ದಿರುವ ಶಂಕೆಯಿದೆ. ಒಂದು ವೇಳೆ ಅವರು ಸ್ನಾನಕ್ಕಿಳಿದಿದ್ದರೆ ಅವರ ಕೈಯಲ್ಲಿ ವಾಚ್ ಇರುತ್ತಿರಲಿಲ್ಲ. ಮೈಮೇಲೆ ಬಟ್ಟೆ ಇರುತ್ತಿರಲಿಲ್ಲ. ಅವರು ಬಿದ್ದ ರಭಸಕ್ಕೆ ಲೋಹಿತಾಕ್ಷರ ತಲೆಗೆ ಗಾಯವಾಗಿದ್ದು, ಇದರಿಂದ ಮೃತಪಟ್ಟಿರುವ ಸಾಧ್ಯತೆಯೂ ಇದೆ. ಆದ್ದರಿಂದ ಇವರ ಸಾವಿಗೆ ನಿಖರ ಕಾರಣ ಇನ್ನೂ ತಿಳಿದು ಬಂದಿಲ್ಲ. ಲೋಹಿತಾಕ್ಷ ಅವರು ಇಲೆಕ್ಟ್ರಿಕಲ್ ಗುತ್ತಿಗೆ ಕೆಲಸಕ್ಕೆ ಹೋಗುತ್ತಿದ್ದರು. ಸೋಮವಾರ ಕೆಲಸಕ್ಕೆ ರಜೆಯಿದ್ದ ಕಾರಣ ಶಂಭೂರಿನಲ್ಲಿದ್ದ ಸ್ನೇಹಿತನ ಸಂಬಂಧಿಕರ ಮನೆಗೆ ತೆರಳಿ ನಂತರ ನೇತ್ರಾವತಿ ನದಿಗೆ ಸ್ನಾನಕ್ಕೆ ತೆರಳಿದ್ದಾರೆ ಎಂದು ತಿಳಿದು ಬಂದಿದೆ. ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ. ಮನೆಗೆ ಆಧಾರ ಸ್ತಂಭವಾಗಿದ್ದ ಲೋಹಿತಾಕ್ಷರಿಗೆ ಒಂದು ವರ್ಷದ ಹಿಂದೆಯಷ್ಟೇ ಮದುವೆಯಾಗಿತ್ತು. ಮೃತರು ತಾಯಿ ಮತ್ತು ಪತ್ನಿಯನ್ನು ಅಗಲಿದ್ದಾರೆ.