ಉಡುಪಿ: ಶಂಕಿತ ಮಂಗನಕಾಯಿಲೆ(ಕೆಎಫ್‌ಡಿ)ಗಾಗಿ ಕಳೆದ ಶನಿವಾರ ಪರೀಕ್ಷೆಗಾಗಿ ಕಳುಹಿಸಲಾದ ಇಬ್ಬರು ಜ್ವರಪೀಡಿತ ವ್ಯಕ್ತಿಗಳ ಸ್ಯಾಂಪಲ್‌ಗಳು ‘ನೆಗೆಟಿವ್’ ಫಲಿತಾಂಶವನ್ನು ತೋರಿಸಿವೆ ಎಂದು ಉಡುಪಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಐ.ಪಿ.ಗಡಾದ್ ತಿಳಿಸಿದ್ದಾರೆ. ಈ ಮೂಲಕ ಉಡುಪಿ ಜಿಲ್ಲೆಯಲ್ಲಿ ಮಂಗನಕಾಯಿಲೆಗಾಗಿ ಒಟ್ಟು ಮೂರು ಮಂದಿ ಶಂಕಿತರ ಸ್ಯಾಂಪಲ್‌ಗಳನ್ನು ಶಿವಮೊಗ್ಗದ ಪ್ರಯೋಗಾಲಯದಲ್ಲಿ ಪರೀಕ್ಷೆಗೊಳಪಡಿಸಿದ್ದು, ಇವರಲ್ಲಿ ವಂಡ್ಸೆ ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯ ಕೆಂಚನೂರಿನ ಮಹಿಳೆಯೊಬ್ಬರಲ್ಲಿ ಮಾತ್ರ ಸೋಂಕು ಪತ್ತೆಯಾಗಿದ್ದು, ಉಳಿದ ಇಬ್ಬರದು ನೆಗೆಟಿವ್ ಆಗಿದೆ.ಹೀಗಾಗಿ ಸದ್ಯ ಜಿಲ್ಲೆಯಲ್ಲಿ ಯಾವುದೇ ಸಕ್ರಿಯ ಮಂಗನಕಾಯಿಲೆ ಪ್ರಕರಣಗಳು ಇಲ್ಲ.