ಮಂಗಳೂರು: ನಾಡಿನೆಲ್ಲೆಡೆ ಇದೀಗ ದೀಪಾವಳಿ ಹಬ್ಬದ ಸಂಭ್ರಮ. ಈಗಾಗಲೇ ಜನತೆ ದೀಪಾವಳಿ ಹಬ್ಬದ ಸಡಗರದಲ್ಲಿ ಖರೀದಿಯಲ್ಲಿ ತೊಡಗಿಸಿಕೊಂಡಿದ್ದಾರೆ. ಇಂದು ನರಕಚತುರ್ದಶಿ ಸಂಭ್ರಮವಾಗಿದ್ದು, ನಾಡಿನ ಜನತೆ ಎಣ್ಣೆ ಹಚ್ಚಿ ಸ್ನಾನ ಮಾಡಿ, ದೇವರಿಗೆ ವಿಶೇಷ ಪೂಜೆ ಮಾಡಿದರು. ಇನ್ನು ದೀಪಾವಳಿ ಅಂದರೆ ಪಟಾಕಿ ಇರಲೇಬೇಕು. ಆದರೆ ಪಟಾಕಿ ಸಿಡಿಸುವ ಮುನ್ನ ಇರಲಿ ಎಚ್ಚರ ಎನ್ನುವುದು ಕಿವಿಮಾತು. ಕ್ಷಣ ಮಾತ್ರದ ಸಂಭ್ರಮಕ್ಕೆ ಇಡೀ ಬದುಕನ್ನು ಕತ್ತಲೆ ಮಾಡಿಕೊಳ್ಳುವವರು ಇದ್ದಾರೆ.
ಹೀಗಾಗಿ ಪಟಾಕಿಸಿಡಿಸುವುದಿದ್ದರೂ ಅತ್ಯಂತ ಜಾಗರೂಕರಾಗಿ ಪಟಾಕಿ ಸಿಡಿಸಿರಿ ಎನ್ನುವುದು ಹಿರಿಯರ ಎಚ್ಚರಿಕೆ. ಇನ್ನು ಜನತೆ ಹಸಿರು ಪಟಾಕಿಗೆ ಹೆಚ್ಚಿನ ಒತ್ತು ನೀಡಬೇಕಾಗಿದೆ. ಸಾರ್ವಜನಿಕ ಆಸ್ತಿ ಮತ್ತು ಆರೋಗ್ಯದ ಸಂರಕ್ಷಣೆ, ಪರಿಸರ ಮಾಲಿನ್ಯ ಮತ್ತು ಶಬ್ಧ ಮಾಲಿನ್ಯ ನಿಯಂತ್ರಣದಲ್ಲಿಡುವ ಉದ್ದೇಶದಿಂದ 125 ಡೆಸಿಬಲ್ ಅಥವಾ 145 ಡಿಸಿಬಲ್ ಹೆಚ್ಚು ಶಬ್ಧ ಮಾಡುವ ಪಟಾಕಿ ಹಾಗೂ ಸಿಡಿಮದ್ದುಗಳ ಮಾರಾಟ ಮತ್ತು ಉಪಯೋಗವನ್ನು ನಿಷೇಧಿಸಲಾಗಿದೆ.
ರಾತ್ರಿ 10ರಿಂದ ಬೆಳಿಗ್ಗೆ 6ಗಂಟೆಯವರೆಗೆ ಪಟಾಕಿ, ಸಿಡಿಮದ್ದು ಸಿಡಿಸುವುದನ್ನು ನಿಷೇಧಿಸಲಾಗಿದೆ. ದಿನದ ಯಾವುದೇ ಸಮಯದಲ್ಲಿ ನಿಶ್ಯಬ್ಧ ವಲಯಗಳೆಂದು ಘೋಷಿಸಲ್ಪಟ್ಟಿರುವ ಸ್ಥಳಗಳ ಸುತ್ತಮುತ್ತ ಯಾವುದೇ ರೀತಿಯ ಶಬ್ಧ ಉಂಟುಮಾಡುವ ನಿಷೇಧಿತ, ಪಟಾಕಿ ಸಿಡಿಮದ್ದು ಬಳಸಬಾರದು. ಸುಪ್ರೀಂಕೋರ್ಟ್ ನಿರ್ದೇಶನಗಳಲ್ಲಿ ಅನುಮತಿಸಿರುವ ಹಸಿರು ಪಟಾಕಿಗಳನ್ನು ಮಾತ್ರ ಉಪಯೋಗಿಸಬೇಕು. ಸಾರ್ವಜನಿಕರು ಪಟಾಕಿ ಹಾಗೂ ಸಿಡಿಮದ್ದುಗಳನ್ನು ವಸತಿ ಪ್ರದೇಶಗಳಲ್ಲಿ ಉಪಯೋಗಿಸುವ ಬದಲು ಮೈದಾನಗಳಲ್ಲಿ ಸಿಡಿಸಬೇಕು. ಸಾರ್ವಜನಿಕರಲ್ಲಿ ದೀಪಾವಳಿ ಹಬ್ಬವನ್ನು ಸಿಡಿಮದ್ದು ಪಟಾಕಿಗಳನ್ನು ಉಪಯೋಗಿಸದೇ ದೀಪದ ಹಬ್ಬವನ್ನಾಗಿ ಆಚರಿಸುವಂತೆ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಪ್ರಾದೇಶಿಕ ಅಧಿಕಾರಿ ತಿಳಿಸಿದ್ದಾರೆ.