ಪ್ರಸಿದ್ಧ ವಿಹಾರ ತಾಣ ಪಣಂಬೂರು ಬೀಚ್ ನಲ್ಲಿ ಫೆ.19ರ ಸಂಜೆ 4:30ರಿಂದ ಡಿಜೆ ಪಾರ್ಟಿಯೊಂದನ್ನು ಆಯೋಜಿಸಲಾಗಿದ್ದು ಈಗಾಗಲೇ ಅದರ ಟಿಕೆಟ್ ಗಳು ಸೋಲ್ಡ್ ಔಟ್ ಆಗಿವೆ. ಈ ಮಧ್ಯೆ ಡಿಜೆ ಪಾರ್ಟಿ ಹೆಸರಲ್ಲಿ ಕಾಲೇಜ್ ವಿದ್ಯಾರ್ಥಿ ವಿದ್ಯಾರ್ಥಿನಿಯರು ದಾರಿ ತಪ್ಪುತ್ತಿದ್ದಾರೆ, ಪೊಲೀಸ್ ಇಲಾಖೆ ಅನುಮತಿ ನೀಡಿದ್ದಾದರೂ ಹೇಗೆ ಎಂದು ಹಿಂದೂ ಸಂಘಟನೆಗಳು ಕೆಂಗಣ್ಣು ಬೀರಿವೆ.
ಬೀಚ್ ಪ್ರವಾಸೋದ್ಯಮ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಕಾಡೆ ಮಲಗಿದೆ. ಸಂಜೆ ಆರು ಗಂಟೆಯ ಬಳಿಕ ಜನಸಾಮಾನ್ಯರ ವಿಹಾರಕ್ಕೆ ಪೊಲೀಸರೇ ಇಲ್ಲಸಲ್ಲದ ಕಾರಣ ಹೇಳಿ ಅಡ್ಡಿಪಡಿಸುತ್ತಿದ್ದಾರೆ ಎಂಬ ಆರೋಪವಿದೆ. ಹೀಗಿರುವಾಗ 4:30ರಿಂದ ಬೀಚ್ ನಲ್ಲಿ ಓಪನ್ ಆಗಿ ಗುಂಡು ತುಂಡಿನ ಡಿಜೆ ಪಾರ್ಟಿ ಆಯೋಜನೆಗೆ ಅನುಮತಿ ನೀಡಲು ಕಾರಣವೇನು ಅನ್ನೋದು ಜನರ ಪ್ರಶ್ನೆ.
ಮಂಗಳೂರಲ್ಲಿ ಪಬ್ ಗಳಲ್ಲಿ ಮ್ಯೂಸಿಕ್ ಹಾಕುವಂತಿಲ್ಲ ಎಂಬ ಹೊಸ ನಿಯಮವನ್ನು ಕೆಳದಿನಗಳಿಂದ ಪೊಲೀಸ್ ಇಲಾಖೆ ಹೊಸದಾಗಿ ಜಾರಿಗೆ ತಂದಿದೆ. ಇದರಿಂದ ಪಬ್ ಖಾಲಿಯಾಗಿ ಮಾಲಕರು ಕಂಗಲಾಗಿದ್ದು ಹೊರಗಿನ ಪ್ರವಾಸಿಗರು ಮಂಗಳೂರಿನ ಸಹವಾಸವೇ ಬೇಡ ಎನ್ನುತ್ತಿದ್ದಾರೆ.
ಹೀಗಿರುವಾಗ ಸಾರ್ವಜನಿಕ ಪ್ರದೇಶದಲ್ಲಿ ಡಿಜೆ ಡ್ಯಾನ್ಸ್, ಪಾರ್ಟಿ ಆಯೋಜನೆಯಲ್ಲಿ ಯಾರ “ಕೈ”ವಾಡ ಇರಬಹುದು ಎನ್ನುತ್ತಾರೆ ಸಾರ್ವಜನಿಕರು. ಹಿಂದೂ ಸಂಘಟನೆಗಳು ಡಿಜೆ ಪಾರ್ಟಿಯ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆ ನಡೆಸುತ್ತಿವೆ.