ಬೆಂಗಳೂರು : ಸಿರಿಧಾನ್ಯ ಬಳಕೆ ಉತ್ತೇಜಿಸಲು ರಾಜ್ಯ ಸರ್ಕಾರ ಮಹತ್ವದ ಕ್ರಮ ಕೈಗೊಂಡಿದ್ದು, ರಾಜ್ಯದ ಎಲ್ಲ ಸರ್ಕಾರಿ ಸಭೆ, ಸಮಾರಂಭಗಳಲ್ಲಿ ಸಿರಿಧಾನ್ಯ ಆಧಾರಿತ ತಿಂಡಿ ತಿನಿಸು, ಪಾನೀಯಗಳನ್ನು ಬಳಸುವಂತೆ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ವಿಶ್ವಸಂಸ್ಥೆಯಿಂದ ಅಂತಾರಾಷ್ಟ್ರೀಯ ಸಿರಿಧಾನ್ಯಗಳ ವರ್ಷ ಘೋಷಣೆ ಮಾಡಲಾಗಿದ್ದು, ಸಿರಿಧಾನ್ಯ ಆಧಾರಿತ ತಿಂಡಿ, ತಿನಿಸು, ಪಾನೀಯ ಬಳಸುವಂತೆ ರಾಜ್ಯ ಸರ್ಕಾರದ ಎಲ್ಲಾ ಇಲಾಖೆಗಳು, ಅಧೀನ ಕಚೇರಿಗಳು, ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ, ಗ್ರಾಮ ಪಂಚಾಯಿತಿಗಳಿಗೆ ಸುತ್ತೋಲೆ ಹೊರಡಿಸಲಾಗಿದೆ. ಎಲ್ಲಾ ಸಭೆಗಳಲ್ಲಿ ಸಿರಿಧಾನ್ಯ ಆಧಾರಿತ ತಿಂಡಿ, ತಿನಿಸು, ಪಾನೀಯ ಬಳಕೆ ಮಾಡುವಂತೆ ಸರ್ಕಾರ ಸೂಚಿಸಲಾಗಿದೆ.
ರಾಜ್ಯ ಸರ್ಕಾರದ ವಿವಿಧ ಯೋಜನೆಗಳಡಿಯಲ್ಲಿ ಸಿರಿಧಾನ್ಯಗಳ ಉತ್ಪಾದನೆ ಮತ್ತು ಬಳಕೆಯನ್ನು ಉತ್ತೇಜಿಸುವ ಸಲುವಾಗಿ ಹಾಗೂ ಸಿರಿಧಾನ್ಯಗಳಿಗೆ ದೇಶಿಯ ಹಾಗೂ ಜಾಗತಿಕ ಬೇಡಿಕೆಯನ್ನು ಸೃಷ್ಟಿಸಲು ಹಾಗೂ ಜನರಿಗೆ ಪೌಷ್ಟಿಕಾಂಶದ ಆಹಾರವನ್ನು ಒದಗಿಸಲು ಅಂತಾರಾಷ್ಟ್ರೀಯ ಸಿರಿಧಾನ್ಯಗಳು ವರ್ಷ ಎಂದು ಘೋಷಿಸಲು ವಿಶ್ವಸಂಸ್ಥೆಗೆ ಭಾರತ ಸರ್ಕಾರ 2021 ರಲ್ಲಿ ಪ್ರಸ್ತಾಪಿಸಿತ್ತು. ಹೀಗಾಗಿ ವಿಶ್ವಸಂಸ್ಥೆ 2023ನೇ ವರ್ಷವನ್ನು ಅಂತಾರಾಷ್ಟ್ರೀಯ ಸಿರಿಧಾನ್ಯಗಳ ವರ್ಷ ಎಂದು ಘೋಷಿಸಿದೆ.