ಉಪ್ಪಿನಂಗಡಿ: ಅಟೋ ರಿಕ್ಷಾದಲ್ಲಿ ಮಾದಕ ವಸ್ತು ಸಾಗಿಸುತ್ತಿದ್ದ ಸಂದರ್ಭ ಆರೋಪಿಗಳನ್ನು ಬಂಧಿಸಿರುವ ಉಪ್ಪಿನಂಗಡಿ ಪೊಲೀಸರು ಅವರಿಂದ ಮಾದಕ ವಸ್ತು ಸಾಗಾಟಕ್ಕೆ ಬಳಸಿದ್ದ ಅಟೋ ರಿಕ್ಷಾ ಹಾಗೂ 9.36 ಗ್ರಾಂ ನಿಷೇಧಿತ ಎಂ.ಡಿ.ಎಂ.ಎ. ಅನ್ನು ವಶಕ್ಕೆ ಪಡೆದಿದ್ದಾರೆ.
ಬಂಟ್ವಾಳ ತಾಲೂಕು ಕೆದಿಲ ಗ್ರಾಮ ನಿವಾಸಿ ಮೊಹಮ್ಮದ್ ನಾಸೀರ್ (24 ವ), ಬಂಟ್ವಾಳ ತಾಲೂಕು ಪೆರಾಜೆ ಗ್ರಾಮದ ಏನಾಜೆ ಬುಡೋಳಿ ನಿವಾಸಿ ಮಹಮ್ಮದ್ ಆಸೀಫ್ .ಬಿ(21 ವ) ಹಾಗೂ ಸಿನಾನ್ ಆರೋಪಿಗಳು ಎಂದು ಗುರುತಿಸಲಾಗಿದೆ.
ಉಪ್ಪಿನಂಗಡಿ ಪೊಲೀಸ್ ಠಾಣಾ ಉಪನಿರೀಕ್ಷಕ ಅವಿನಾಶ್ ಎಚ್. ಮತ್ತು ಸಿಬ್ಬಂದಿ ಆ.9ರಂದು 34 ನೆಕ್ಕಿಲಾಡಿ ಗ್ರಾಮದ ನೆಕ್ಕಿಲಾಡಿ ಜಂಕ್ಷನ್ ಬಳಿ ವಾಹನ ತಪಾಸಣೆ ನಡೆಸುತ್ತಿದ್ದಾಗ ಅಟೋ ರಿಕ್ಷಾವೊಂದು ಬಂದಿದ್ದು, ಇದನ್ನು ತಪಾಸಣೆಗೆ ನಿಲ್ಲಿಸಲು ಸೂಚಿಸಿದಾಗ ಅಟೋ ರಿಕ್ಷಾವನ್ನು ಅಲ್ಲಿ ನಿಲ್ಲಿಸದೇ ಮುಂದಕ್ಕೆ ರಸ್ತೆ ಬದಿ ನಿಲ್ಲಿಸಿ ಅದರಲ್ಲಿದ್ದ ಚಾಲಕ ಹಾಗೂ ಇನ್ನೊಬ್ಬಾತ ಓಡಿ ಪರಾರಿಯಾಗಲು ಯತ್ನಿಸಿದರು.
ಆ ಸಂದರ್ಭ ಅವರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಅಟೋ ರಿಕ್ಷಾದಲ್ಲಿ 18,720 ರೂ. ಮೌಲ್ಯದ 9.36 ಗ್ರಾಂ ನಿಷೇಧಿತ ಎಂ.ಡಿ.ಎಂ.ಎ. ಮಾದಕ ವಸ್ತು ಹಾಗೂ 15 ಚಿಕ್ಕ ಚಿಕ್ಕ ಪ್ಲಾಸ್ಟಿಕ್ ಕವರ್ ಗಳು ಪತ್ತೆಯಾಗಿವೆ. ಆರೋಪಿಗಳನ್ನು ಬಂಧಿಸಿದ ಪೊಲೀಸರು ಅಟೋ ರಿಕ್ಷಾ ಸಹಿತ ಮಾದಕ ವಸ್ತುವನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.