ಉಡುಪಿ : ಮಹಿಷ ಮಂಡಲವನ್ನಾಳಿದ ದ್ರಾವಿಡ ದೊರೆ ಮಹಿಷಾಸುರನ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಅಕ್ಟೋಬರ್ 15 ರಂದು ಉಡುಪಿಯಲ್ಲಿ ಮೊದಲ ಬಾರಿಗೆ ಮಹಿಷ ದಸರಾ ಹಾಗೂ ಮೂಲ ನಿವಾಸಿಗಳ ಸಾಂಸ್ಕೃತಿಕ ಹಬ್ಬವನ್ನು ಆಚರಿಸಲಾಗುವುದು ಎಂದು ಉಡುಪಿ ಜಿಲ್ಲಾ ಅಂಬೇಡ್ಕರ್ಯುವ ಸೇನೆ ಜಿಲ್ಲಾಧ್ಯಕ್ಷ ಹರೀಶ್ ಕೋಟ್ಯಾನ್ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಮಹಿಷಾಸುರ ಒಬ್ಬ ದುಷ್ಟ ಪ್ರಜಾಕಂಟಕ ಎಂಬಂತೆ ಚಿತ್ರಿಸಲಾಗಿದೆ. ಆದರೆ ಮಹಿಷಾಸುರ ಈ ದೇಶದ ಅಸುರ ಸಾಮ್ರಾಜ್ಯದ ನಾಯಕರಲ್ಲಿ ಅಗ್ರಗಣ್ಯನಾಗಿದ್ದ ಎಂದರು. ಅಕ್ಟೋಬರ್ 15ರಂದು ಬೆಳಗ್ಗೆ ಮಹಿಷ ರಾಜನ ಸ್ತಬ್ಧ ಚಿತ್ರವನ್ನು ಉಡುಪಿ ಅಜ್ಜರಕಾಡಿನ ಹುತಾತ್ಮ ಸ್ಮಾರಕದಿಂದ ಆದಿವುಡುಪಿಯ ಅಂಬೇಡ್ಕರ್ಭವನದವರೆಗೆ ಜಾಥಾ ನಡೆಸಲಾಗುತ್ತದೆ. ಬಳಿಕ ‘ಮಹಿಷಾಸುರ ಯಾರು’ ಎಂಬ ವಿಚಾರಸಂಕಿರಣವನ್ನು ಕಲಬುರಗಿಯ ಸಂಶೋಧಕ ಡಾ.ವಿಠಲ ವಗ್ಗನ್ ಕಾರ್ಯಕ್ರಮ ಉದ್ಘಾಟಿಸಿ ವಿಚಾರ ಮಂಡನೆ ಮಾಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ದಲಿತ ಚಿಂತಕ ನಾರಾಯಣ ಮಣೂರು ಹಾಗೂ ಪ್ರಗತಿಪರ ಚಿಂತಕ ಶ್ರೀರಾಮ ದಿವಾಣ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.