ಮಂಗಳೂರು: ಟ್ರಾಫಿಕ್ ಪೊಲೀಸರು ತಮ್ಮ ಠಾಣಾ ವ್ಯಾಪ್ತಿಯ ಜಂಕ್ಷನ್, ವಾಹನ ದಟ್ಟಣೆ ಪ್ರದೇಶದಲ್ಲಿ ಬೆಳಗ್ಗೆ, ಸಂಜೆ ಹೊತ್ತು ಕಡ್ಡಾಯವಾಗಿ ಕರ್ತವ್ಯ ನಿರ್ವಹಿಸಬೇಕು. ಈಗಾಗಲೇ ಈ ಕುರಿತು ಸೂಚನೆ ನೀಡಲಾಗಿದ್ದು, ಶೇ.95ರಷ್ಟು ಮಂದಿ ಠಾಣೆಯಿಂದ ಹೊರಗಿರಬೇಕು ಎಂದು ನಗರ ಪೊಲೀಸ್ ಆಯುಕ್ತ ಕುಲದೀಪ್ ಕುಮಾರ್ ಜೈನ್ ಸೂಚನೆ ನೀಡಿದ್ದಾರೆ.
ರವಿವಾರ ನಗರದ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಜರಗಿದ ಪ.ಜಾ./ಪ.ಪಂಗಡದವರ ಕುಂದುಕೊರತೆ ಸಭೆಯಲ್ಲಿ ಅವರು ಮಾತನಾಡಿದರು.
ಕೆಲವು ಜಂಕ್ಷನ್‌ಗಳಲ್ಲಿ ಟ್ರಾಫಿಕ್ ಪೊಲೀಸರು ಸರಿಯಾಗಿ ಕರ್ತವ್ಯ ನಿರ್ವಹಿಸುವುದಿಲ್ಲ. ಮರದಡಿಯಲ್ಲಿ ನಿಂತು ಮೊಬೈಲ್ ನೋಡಿಕೊಂಡು ಇರುತ್ತಾರೆ ಎನ್ನುವ ದಲಿತ ಮುಖಂಡರ ದೂರಿನ ಹಿನ್ನೆಲೆಯಲ್ಲಿ ಈ ಎಚ್ಚರಿಕೆ ನೀಡಿದರು. ಇದರಿಂದ ಅಪಘಾತಗಳು ಉಂಟಾಗುವುದನ್ನು ತಡೆಯಲು ಸಾಧ್ಯವಿದೆ. ಪೊಲೀಸರು ಇರುವುದನ್ನು ನೋಡಿದರೆ ವಾಹನ ಸವಾರರಲ್ಲಿ ಶಿಸ್ತು ಇರುತ್ತದೆ ಎಂದರು.