ಮನೆಯಲ್ಲಿ ಕೆಲವೊಮ್ಮೆ ಒಂದೇ ತರಹದ ಸಾರು ಹಾಗೂ ಪಲ್ಯಗಳನ್ನು ಮಾಡಿದ್ದರೆ ಹೆಚ್ಚಾಗಿ ತಿನ್ನುವುದಿಲ್ಲ. ಹಾಗೆ ಕೆಲವೊಮ್ಮೆ ಮನೆಯಲ್ಲಿ ಚಪಾತಿ ಅಥವಾ ಅನ್ನದ ಜೊತೆ ತಿನ್ನಲು ಮನೆಮಂದಿಗೆಲ್ಲಾ ಸಾಕಾಗುವಷ್ಟು ಸಾರು ಹಾಗೂ ಪಲ್ಯಗಳನ್ನು ಮಾಡುವುದು ಕಷ್ಟವಾಗಿರುತ್ತದೆ.
ಅಂತಹ ಸಂದರ್ಭದಲ್ಲಿ ಮನೆಯಲ್ಲಿ ಮೊಟ್ಟೆ ಇದ್ದರೆ ಸುಲಭವಾಗಿ ಹಾಗೂ ಬಹಳ ಬೇಗನೆ ಈ ರೆಸಿಪಿಯನ್ನು ಮಾಡಬಹುದಾಗಿದೆ. ಅದನ್ನು ಹೇಗೆ ತಯಾರಿಸುವುದು ಎಂಬ ವಿಧಾನವನ್ನು ತಿಳಿಯೋಣ.
ಬೇಕಾಗುವ ಸಾಮಗ್ರಿ :
- ಮೊಟ್ಟೆ
- ಈರುಳ್ಳಿ
- ಟೊಮೊಟೊ
- ಹಸಿಮೆಣಸು
- ಎಣ್ಣೆ
- ಎಗ್ ಮಸಾಲ ಪುಡಿ
(Egg New Recipe)ತಯಾರಿಸುವ ವಿಧಾನ :
ಮೊದಲಿಗೆ ಗ್ಯಾಸ್ ಆನ್ ಮಾಡಿ ಒಂದು ಬಾಣಲೆಯನ್ನು ಇಟ್ಟು ಅದಕ್ಕೆ ಎರಡು ಟೇಬಲ್ ಸ್ಪೂನ್ ಎಣ್ಣೆಯನ್ನು ಹಾಕಬೇಕು.ಎಣ್ಣೆ ಬಿಸಿಯಾದ ಮೇಲೆ ನಾಲ್ಕು ಹಸಿಮೊಟ್ಟೆಯನ್ನು ಹಾಕಿ ಚೆನ್ನಾಗಿ ಪ್ರೈ ಮಾಡಿಕೊಳ್ಳಬೇಕು. ಚೆನ್ನಾಗಿ ಪ್ರೈಯಾದ ಮೊಟ್ಟೆ ಸಣ್ಣ ಸಣ್ಣ ಉಂಡೆ ರೂಪಕ್ಕೆ ಬರುತ್ತದೆ. ನಂತರ ಅದನ್ನು ಒಂದು ಪಾತ್ರೆಗೆ ತೆಗೆದು ಇಟ್ಟುಕೊಳ್ಳಬೇಕು. ಇನ್ನೊಂದು ಬಾಣಲೆಯಲ್ಲಿ ನಾಲ್ಕು ಟೇಬಲ್ ಸ್ಪೂನ್ ಎಣ್ಣೆಯನ್ನು ಹಾಕಿ ಅದಕ್ಕೆ ಸಣ್ಣಕ್ಕೆ ಹಚ್ಚಿ ಇಟ್ಟುಕೊಂಡ ನಾಲ್ಕು ಹಸಿಮೆಣಸನ್ನು ಹಾಕಬೇಕು. ಆಮೇಲೆ ಸಣ್ಣಕ್ಕೆ ಹಚ್ಚಿ ಇಟ್ಟುಕೊಂಡ ಮೂರು ಈರುಳ್ಳಿಯನ್ನು ಹಾಕಿ ಚೆನ್ನಾಗಿ ಪ್ರೈ ಮಾಡಿಕೊಳ್ಳಬೇಕು.
ಅದಕ್ಕೆ ಹಚ್ಚಿ ಇಟ್ಟುಕೊಂಡ ಎರಡು ಟೊಮೊಟೊವನ್ನು ಹಾಕಿಕೊಳ್ಳಬೇಕು. ನಂತರ ಅದಕ್ಕೆ ಕಾಲು ಟೇಬಲ್ ಸ್ಪೂನ್‌ನಷ್ಟು ಅರಶಿನ ಪುಡಿ ಹಾಗೂ ರುಚಿ ತಕ್ಕಷ್ಟು ಉಪ್ಪುನ್ನು ಸೇರಿಸಿ ಪಾತ್ರೆಯನ್ನು ಮುಚ್ಚಿ ಮೂರು ನಿಮಿಷಗಳ ಕಾಲ ಬೇಯಿಸಬೇಕು. ಅರಶಿನ ಪುಡಿ ಹಾಗೂ ಉಪ್ಪುನ್ನು ಹಾಕಿರುವುದರಿಂದ ಚೆನ್ನಾಗಿ ಬೇಯುತ್ತದೆ. ಹಾಗೆ ಪಾತ್ರೆ ಮುಚ್ಚಳವನ್ನು ತೆಗೆದಾಗ ಚೆನ್ನಾಗಿ ಬೆಂದು ಎಣ್ಣೆ ಬಿಟ್ಟಿರುವುದು ಕಾಣಿಸುತ್ತದೆ. ನಂತರ ಇದಕ್ಕೆ ಮೊದಲೇ ಪ್ರೈ ಮಾಡಿ ಇಟ್ಟುಕೊಂಡ ಮೊಟ್ಟೆಯನ್ನು ಹಾಕಿ ಮಗುಚಿಕೊಳ್ಳಬೇಕು.
ಗ್ರೇವಿಗೊಸ್ಕರ ಒಂದರಿಂದ ಎರಡು ಲೋಟ ನೀರನ್ನು ಹಾಕಿ ಸ್ವಲ್ಪ ಹೊತ್ತು ಕುದಿಸಿಕೊಳ್ಳಬೇಕು. ಆಮೇಲೆ ಇದಕ್ಕೆ ಸ್ವಲ್ಪ ಎಗ್ ಮಸಾಲವನ್ನು ಹಾಕಿ ಮಗುಚಿಕೊಳ್ಳಬೇಕು. ಹೀಗೆ ಮನೆ ಮಂದಿಗೆ ಆಗುವಷ್ಟು ರುಚಿಯಾದ ಮೊಟ್ಟೆ ರೆಸಿಪಿ ರೆಡಿಯಾಗಿರುತ್ತದೆ. ಇದನ್ನು ಚಪಾತಿ ಹಾಗೂ ರೊಟ್ಟಿ ಜೊತೆ ಸವಿಯಲು ಬಹಳ ರುಚಿಯಾಗಿರುತ್ತದೆ. ಹಾಗೆ ಅನ್ನದ ಜೊತೆ ಕೂಡ ಚೆನ್ನಾಗಿರುತ್ತದೆ. ಇದನ್ನು ಬಹಳ ರುಚಿಯಾಗಿ ಹಾಗೂ ಬಹಳ ಬೇಗನೆ ತಯಾರಿಸಬಹುದಾಗಿದೆ.