ಮಂಗಳೂರು: ಮಂಡ್ಯ ಜಿಲ್ಲೆಯ ನಾಗಮಂಗಲದಲ್ಲಿ ಗಣೇಶ ವಿಸರ್ಜನೆ ವೇಳೆ ಗಲಭೆ ಪ್ರಕರಣ ಕ್ಕೆ ಸಂಬಂಧಿಸಿದಂತೆ ಮಂಗಳೂರಿನ ಮಲ್ಲಿಕಟ್ಟೆ ಸರ್ಕಲ್ ಬಳಿ ವಿಶ್ವ ಹಿಂದೂ ಪರಿಷದ್ ಧರಣಿ ಕೈಗೊಂಡಿದೆ. ಈ ವೇಳೆ ವಿಶ್ವ ಹಿಂದೂ ಪರಿಷದ್ ಮುಖಂಡ ಶರಣ್ ಪಂಪ್ ವೆಲ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸೋಮವಾರ ಈದ್ ಮಿಲಾದ್ ಮೆರವಣಿಗೆಗೆ ಅವಕಾಶ ಕೊಡಬಾರದು. ಅನುಮತಿ ಕೊಟ್ಟರೆ ಮತ್ತೆ ಇವರು ಗಲಭೆ ಮಾಡುತ್ತಾರೆ. ಇದಕ್ಕೆ ನೇರವಾಗಿ ರಾಜ್ಯ ಸರ್ಕಾರವೇ ಹೊಣೆ ಆಗುತ್ತದೆ ಎಂದು ಕಿಡಿಕಾರಿದ್ದಾರೆ.
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮುಂದಿನ ವಾರ ಈದ್ ಮೆರವಣಿಗೆ ಮೇಲೆ ಎಲ್ಲಾ ಹಿಂದುಗಳು ದಾಳಿ ಮಾಡಿದರೆ ಏನಾಗಬಹುದು ಅಂತಾ ಊಹೆ ಇದೆಯಾ. ಆದ್ದರಿಂದ ನಿನ್ನೆಯ ದಾಳಿಕೋರರಿಗೆ ಎಚ್ವರಿಕೆ ಸಂದೇಶ ಕೊಡುತ್ತಿದ್ದೇವೆ. ಸರ್ಕಾರ ಈದ್ ಕಾರ್ಯಕ್ರಮಕ್ಕೆ ಅನುಮತಿ ನೀಡಬಾರದು. ಈದ್ ನೆಪದಲ್ಲಿ ಕೂಡ ದಾಳಿ ಮಾಡುವ ಸಾಧ್ಯತೆ ಇದೆ ಎಂದು ಹೇಳಿದ್ದಾರೆ.
ನಿನ್ನೆಯ ಮಂಡ್ಯ ಗಲಭೆ ಹಿಂದೆ ನಿಷೇಧಿತ ಪಿಎಫ್ಐ ಕೈವಾಡ ಇದೆ. ನಮ್ಮ ಮೆರವಣಿಗೆಗೆ ರಾಜ್ಯ ಸರ್ಕಾರ ಭದ್ರತೆ ನೀಡಲು ಸಿದ್ದವಿಲ್ಲದಿದ್ದರೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿ ಮುಂದಿನ ದಿನಗಳಲ್ಲಿ ಮಿಲಿಟರಿ ಕರೆಸುತ್ತೇವೆ ಎಂದಿದ್ದಾರೆ.
ಇದು ಭಯೋತ್ಪಾದಕ ಕೃತ್ಯ. ಗಣೇಶೋತ್ಸವ ನಡೆಸಬಾರದೆಂದು ಪೂರ್ವನಿಯೋಜಿತ ಕೃತ್ಯ. ಇದು ಕೋಮುಗಲಭೆ ಅಲ್ಲ, ಇದು ಗಣೇಶೋತ್ಸವ ಸಮಿತಿಯ ಮೇಲೆ ನಡೆದಿರುವ ದಾಳಿ. ಇಸ್ಲಾಮಿಕ್ ಭಯೋತ್ಪಾದಕರಿಂದ ಹಿಂದೂಗಳ ಮೇಲೆ ದಾಳಿ ಎಂದು ಶರಣ್ ಪಂಪ್ ವೆಲ್ ಆರೋಪ ಮಾಡಿದ್ದಾರೆ.
ಗೃಹ ಸಚಿವರು ಆಕಸ್ಮಿಕ ಘಟನೆ ಅಂತಾ ಹೇಳಿದ್ದಾರೆ. ನಿಮ್ಮ ಇಲಾಖೆಯ ಪೊಲೀಸರ ಮೇಲೆ ಹಲ್ಲೆ ಆಗಿ ಗಾಯಗೊಂಡಿದ್ದಾರೆ. ಇದು ನಿಮಗೆ ಸಣ್ಣ ಘಟನೆನಾ ಎಂದು ಪ್ರಶ್ನಿಸಿದ್ದಾರೆ. ಡಿ.ಜೆ.ಹಳ್ಳಿ, ಕೆಜೆ ಹಳ್ಳಿ, ಮಂಗಳೂರಿನ ಡಿ.ಸಿ.ಕಚೇರಿ, ಶಿವಮೊಗ್ಗದ ರಾಗಿಗುಡ್ಡದಲ್ಲಿ ನಡೆದ ಘಟನೆಗಳ ನಂತರವೂ ಎಚ್ಚೆತ್ತುಕೊಂಡಿಲ್ಲ ಎಂದು ವಾಗ್ದಾಳಿ ಮಾಡಿದ್ದಾರೆ.