ನವದೆಹಲಿ: ಹಲವಾರು ರಾಜಕೀಯ ಪಕ್ಷಗಳ ಮನವಿಯನ್ನು ಪರಿಗಣಿಸಿ ಭಾರತದ ಚುನಾವಣಾ ಆಯೋಗವು ಕೇರಳ, ಪಂಜಾಬ್ ಮತ್ತು ಉತ್ತರ ಪ್ರದೇಶದ 14 ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯ ಮತದಾನದ ದಿನಾಂಕವನ್ನು ಬದಲಾಯಿಸಿದೆ.
ಈ ಹಿಂದೆ ನ.13 ರಂದು ಚುನಾವಣೆ ಘೋಷಿಸಲಾಗಿತ್ತು. ಈಗ ನ.20ಕ್ಕೆ ಚುನಾವಣೆ ಮುಂದೂಡಿಕೆಯಾಗಿದೆ. ನ.23 ರಂದು ಮತ ಎಣಿಕೆ ನಡೆಯಲಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ.ಕಲ್ಪಾಠಿ ರಥೋತ್ಸವ (ನ. 13-15), ಕಾರ್ತಿಕ ಪೂರ್ಣಿಮಾ (ನ.15) ಮತ್ತು ಶ್ರೀ ಗುರುನಾನಕ್ ದೇವ್ ಅವರ ಪ್ರಕಾಶ್ ಪರ್ವ (ನ.15) ಹಬ್ಬಗಳನ್ನು ಉಲ್ಲೇಖಿಸಿ ರಾಜಕೀಯ ಪಕ್ಷಗಳು ಮತದಾನದ ದಿನಾಂಕವನ್ನು ಬದಲಾಯಿಸಲು ಮನವಿ ಮಾಡಿದ್ದವು. ಅಲ್ಲದೇ ಈ ಹಬ್ಬಗಳು ಈ ರಾಜ್ಯಗಳಲ್ಲಿನ ಮತದಾರರ ಮತದಾನದ ಮೇಲೆ ಪರಿಣಾಮ ಬೀರಬಹುದು ಎಂದು ಪಕ್ಷಗಳು ಹೇಳಿದ್ದವು. ಇದರಿಂದಾಗಿ ದಿನಾಂಕ ಬದಲಾವಣೆ ಮಾಡಲಾಗಿದೆ ಎಂದು ಚುನಾವಣಾ ಸಮಿತಿಯ ಮೂಲಗಳು ತಿಳಿಸಿವೆ.ಈ ಉಪಚುನಾವಣೆಯಲ್ಲಿ ಉತ್ತರ ಪ್ರದೇಶದ 9, ಪಂಜಾಬ್‌ನಲ್ಲಿ 4 ಮತ್ತು ಕೇರಳದ 1 ವಿಧಾನಸಭಾ ಕ್ಷೇತ್ರಗಳಲ್ಲಿ ಮತದಾನ ನಡೆಯುತ್ತಿದೆ.