ಮಂಗಳೂರು: ದೇರೆಬೈಲ್‌ನ ಕೋಟೆಕಣಿಯಲ್ಲಿ ನಡೆದ ಸುಲಿಗೆ ಪ್ರಕರಣದಲ್ಲಿ ಆರೋಪಿಗಳನ್ನು ಪತ್ತೆಹಚ್ಚುವಲ್ಲಿ ಸಿಸಿ ಕ್ಯಾಮರಾ ಪ್ರಮುಖ ಪಾತ್ರ ವಹಿಸಿದ್ದು, ಸಾರ್ವಜನಿಕರು ತಮ್ಮ ಮನೆಗಳ ಮುಖ್ಯ ರಸ್ತೆಗಳಿಗೆ ಹಾಗೂ ಮನೆಗಳ ಸುತ್ತಲೂ ಸಿಸಿ ಕ್ಯಾಮರಾ ಅಳವಡಿಕೆಗೆ ಆದ್ಯತೆ ನೀಡಬೇಕು ಎಂದು ಪೊಲೀಸ್ ಆಯುಕ್ತ ಅನುಪಮ್ ಅಗರ್ವಾಲ್ ಸಲಹೆ ನೀಡಿದ್ದಾರೆ. ಕೋಟೆಕಣಿ ಸುಲಿಗೆ ಪ್ರಕರಣದಲ್ಲಿ ಬಂಧಿಸಲ್ಪಟ್ಟ ಆರೋಪಿಗಳನ್ನು ಬುಧವಾರ ಬೆಳಗ್ಗೆ ಸ್ಥಳ ಮಹಜರು ನಡೆಸಲು ಕರೆದೊಯ್ದ ಸಂದರ್ಭ ಪೊಲೀಸರ ಮೇಲೆ ಹಲ್ಲೆ ನಡೆಸಿ ತಪ್ಪಿಸಲು ಯತ್ನಿಸಿದ ಸಂದರ್ಭ ಪೊಲೀಸರು ಗುಂಡು ಹಾರಿಸಿದ ಪ್ರಕರಣದ ಬಗ್ಗೆ ಸುದ್ದಿಗೋಷ್ಟಿಯಲ್ಲಿ ವಿವರ ನೀಡಿದ ಸಂದರ್ಭ ಅವರು ಈ ವಿಷಯ ತಿಳಿಸಿದರು. ಸಿಸಿ ಕ್ಯಾಮರಾ ಅಳವಡಿಕೆ ಇಂದಿನ ದಿನಗಳಲ್ಲಿ ಅತೀ ಅಗತ್ಯವಾಗಿದೆ. ರಾತ್ರಿ ಹೊತ್ತಿನಲ್ಲೂ ದೃಶ್ಯಗಳನ್ನು ಸೆರೆ ಹಿಡಿಯುವಲ್ಲಿ ಹಾಗೂ ರೆಕಾರ್ಡಿಂಗ್ ವ್ಯವಸ್ಥೆಯನ್ನು ಮನೆ ಮಾಲಕರು ಹಾಗೂ ಅಂಗಡಿ ಮಾಲಕರು ಹೊಂದಿರುವುದನ್ನು ಖಾತರಿಪಡಿಸುವುದು ಉತ್ತಮ ಎಂದರು. ಪೊಲೀಸರು ಈಗಾಗಲೇ ಬೀಟ್ ವ್ಯವಸ್ಥೆಯನ್ನು ಬಿಗಿಗೊಳಿಸಿದ್ದಾರೆ. ಇದಲ್ಲದೆ, ಮನೆಯಲ್ಲಿ ಒಂಟಿಯಾಗಿ ಇರುವವರು ಹಾಗೂ ಮನೆಯಿಂದ ಹಲವು ದಿನಗಳವರೆಗೆ ಹೊರ ಹೋಗುವುದಿದ್ದರೆ ಸ್ಥಳೀಯ ಠಾಣೆಗೆ ಮಾಹಿತಿ ನೀಡಿದರೆ ಅಂತಹ ಪ್ರದೇಶಗಳಲ್ಲಿ ಬೀಟ್ ವ್ಯವಸ್ಥೆಗೆ ಕ್ರಮ ವಹಿಸಲಾಗುತ್ತದೆ. ಎಂದು ಪೊಲೀಸ್ ಆಯುಕ್ತ ಅನುಪಮ್ ಅಗರ್ವಾಲ್ ಹೇಳಿದರು.