ಬೆಂಗಳೂರು: ರಾಜ್ಯ ಆರೋಗ್ಯ ಇಲಾಖೆಯಲ್ಲಿ ಗುತ್ತಿಗೆ, ಹೊರಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿರುವಂತ ನೌಕರರು ತಮ್ಮ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ, ಇಂದಿನಿಂದ ಅನಿರ್ಧಿಷ್ಟಾವಧಿ ಮುಷ್ಕರಕ್ಕೆ ಕರೆ ನೀಡಿದ್ದಾರೆ. ತಮ್ಮ ಬೇಡಿಕೆಗಳನ್ನು ಸರ್ಕಾರ ಈಡೇರಿಸೋವರೆಗೆ ಮುಷ್ಕರ ನಿಲ್ಲಿಸುವುದಿಲ್ಲ ಎಂಬುದಾಗಿ ಎಚ್ಚರಿಕೆಯನ್ನು ನೀಡಿದ್ದಾರೆ.
ಈ ಕುರಿತಂತೆ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಿರುವಂತ ರಾಜ್ಯ ಆರೋಗ್ಯ, ವೈದ್ಯಕೀಯ ಇಲಾಖೆಯ ಗುತ್ತಿಗೆ-ಹೊರಗುತ್ತಿಗೆ ನೌಕರರ ರಾಜ್ಯಾಧ್ಯಕ್ಷ ವಿಶ್ವರಾಧ್ಯ ಎಚ್. ಯಮೋಜಿ ಅವರು, ಗುತ್ತಿಗೆ ಮತ್ತು ಹೊರಗುತ್ತಿಗೆ ನೌಕರರ KSHCOEA ಸಂಘವು ಹಲವಾರು ವರ್ಷಗಳಿಂದ, ಹಲವು ಹಂತಗಳಲ್ಲಿ ಹೋರಾಟ ಮತ್ತು ಸರ್ಕಾರದ ಗಮನ ಸೆಳೆದು ಸರ್ಕಾರವೆ ಆರೋಗ್ಯ ಇಲಾಖೆಯ ಗುತ್ತಿಗೆ ಹೊರಗುತ್ತಿಗೆ ನೌಕರರ ಸಮಸ್ಯೆಗಳನ್ನು ಪರಿಹರಿಸಲು ಶ್ರೀನಿವಾಸಚಾರ ಸಮೀತಿ ರಚಿಸಿ ವರದಿ ಪಡೆದಿದ್ದು ವರ್ಷಗಳೆ ಕಳೆದು ಹೋಗಿದೆ. ಹತ್ತು ಹಲವು ಸಾರಿ ಸದರಿ ನೌಕರರ ಮೇಲಿನ ಅನ್ಯಾಯವನ್ನು ಅತ್ಯಂತ ಜವಾಬ್ದಾರಿಯುತವಾಗಿ ಸರ್ಕಾರಕ್ಕೆ ಮುಜಗರವಾಗದಂತೆ ಬಹಳ ಸಂಯಮದಿಂದ ರಾಷ್ಟ್ರದ ಅತಿದೊಡ್ಡ ಕಾರ್ಮಿಕ ಸಂಘಟನೆ ಭಾರತೀಯ ಮಜ್ದೂರ್ ಸಂಘ ಹಾಗೂ ಶಾಸಕರು ಮತ್ತು ಸಂಘದ ಗೌರವ ಅಧ್ಯಕ್ಷರಾದ ಆಯನೂರು ಮಂಜುನಾಥ್ ರವರ ಮಾರ್ಗದರ್ಶನದಂತೆ ಅತ್ಯಂತ ಶಿಸ್ತು ಮತ್ತು ಸಭ್ಯತೆಯಿಂದ ಸಂಘಟನೆಯು ನಡೆದುಕೊಂಡು ಬಂದಿರುತ್ತದೆ ಎಂದಿದ್ದಾರೆ.
ಈ ಹಿಂದೆ ಸಂಘದ ವತಿಯಿಂದ ಮತ್ತು ಮಾನ್ಯ ಶಾಸಕರು ಹಾಗೂ ಗೌರವಾಧ್ಯಕ್ಷರಾದ ಆಯನೂರು ಮಂಜುನಾಥ್ ರವರು ಮುಖ್ಯಮಂತ್ರಿಗಳಿಗೆ ಹಾಗೂ ಆರೋಗ್ಯ ಸಚಿವರಿಗೆ ಬೇಡಿಕೆಗಳನ್ನು ಈಡೇರಿಸುವಂತೆ ಹಲವಾರು ಬಾರಿ ಒತ್ತಾಯಿಸಲಾಗಿದೆ. ಸರಕಾರಕ್ಕೆ ಸಹಕರಿಸಿದರು, ಕಾಲಕಾಲಕ್ಕೆ ಸಂಘವು ಅವರ ಭರವಸೆಗೆ ಗೌರವಿಸಿದೆ, ಸರಕಾರವು ಆಡಳಿತ ಪಕ್ಷದ ಶಾಸಕರ ಮನವಿಯನ್ನು ಪರಿಗಣಿಸದೇ ಇಲ್ಲಿಯವರೆಗೂ ಶ್ರೀನಿವಾಸಚಾರಿ ವರದಿ ಹಾಗೂ ಇತರೆ ಚರ್ಚಿಸಿದ ಪ್ರಮುಖ ಬೇಡಿಕೆಗಳ ಅನುಷ್ಠಾನಕ್ಕೆ ಸರ್ಕಾರ ಮುಂದಾಗುತ್ತಿಲ್ಲ. ದಿನಾಂಕ 07.07.2022 ರಂದು ಮಾಡಿದ ಬೆಂಗಳೂರು ಚಲೋ ಹೋರಾಟದಲ್ಲಿ ಮಾನ್ಯ ಆರೋಗ್ಯ ಸಚಿವರು ಸ್ವತಃ ಘೋಷಣೆ ಮಾಡಿದ ಅನೇಕ ಬೇಡಿಕೆಗಳು ಘೋಷಣೆಗಳಾಗಿಯೇ ಉಳಿದು ಇಲ್ಲಿಯವರೆಗೆ ಯಾವುದೇ ಆದೇಶ ನಮ್ಮ ನೌಕರರಿಗೆ ಕೈಗೆ ಸಿಕ್ಕಿಲ್ಲ ಮತ್ತು ಗುತ್ತಿಗೆ – ಹೊರಗುತ್ತಿಗೆ ನೌಕರರಿಗೆ ಆಗುತ್ತಿರುವ ವ್ಯವಸ್ಥಿತ ವಿಳಂಬನೀತಿ ಧೋರಣೆ ಹಾಗೂ ನಿರ್ಲಕ್ಷವನ್ನು ಸಂಘವು ಖಂಡಿಸುತ್ತದೆ ಮತ್ತು ನಮ್ಮ ಸಂಘದ ಮೂಲ ಬೇಡಿಕೆಗಳ ಅನುಷ್ಠಾನ ಮಾಡಿರುವುದಿಲ್ಲ ಎಂದು ತಿಳಿಸಿದ್ದಾರೆ.
ಹೀಗಿದೆ ರಾಜ್ಯ ಆರೋಗ್ಯ ಇಲಾಖೆಯ ಗುತ್ತಿಗೆ, ಹೊರಗುತ್ತಿಗೆ ನೌಕರರ ಬೇಡಿಕೆಗಳು
- ನೌಕರರ ಸೇವೆ ಖಾಯಂಗೊಳಿಸಬೇಕು
- ಸಮಾನ ಕೆಲಸಕ್ಕೆ, ಸಮಾನ ವೇತನ ಜಾರಿ ಮಾಡಬೇಕು.
- ಹೊರಗುತ್ತಿಗೆ ನೌಕರರಿಗೆ ಸರ್ಕಾರದಿಂದ ಸಂಸ್ಥೆ ಮತ್ತು ನೇರ ವೇತನ ಪಾವತಿಸಬೇಕು.
- ಸಾಮಾಜಿಕ ಭದ್ರತೆ ಯೋಜನೆಗಳನ್ನು ಜಾರಿಗೊಳಿಸಬೇಕು.
- ನೌಕರರ ಕುಟುಂಬಕ್ಕೆ ಅನುಕಂಪದ ಆಧಾರದ ನೌಕರಿಯನ್ನು ನೀಡಬೇಕು.
- ಕೃಪಾಂಕ ಹೆಚ್ಚಳ: ಶೇ.20ಕ್ಕೆ ನಿಗದಿಯಾಗಿದ್ದ, ಕೃಪಾಂಕ ಶೇ.30ಕ್ಕೆ ಹೆಚ್ಚಿಸಿದ ಆದೇಶಿಸಬೇಕು.
- ಗುತ್ತಿಗೆ ನೌಕರರಿಗೆ ಪ್ರೊತ್ಸಾಹ ಧನವನ್ನು ಮತ್ತು ಹೊರಗುತ್ತಿಗೆ ನೌಕರರಿಗೆ ಬೋನಸ್ ನಿಯಮದಂತೆ ನೀಡಬೇಕು.
- ಜಿಲ್ಲೆಯಿಂದ ಜಿಲ್ಲೆಗೆ ವರ್ಗಾವಣೆ, ವಿಮೆ ಸೇರಿ ಇತರೆ ಪ್ರಮುಖ ಬೇಡಿಕೆಗಳನ್ನು ಈಡೇರಿಸಲಬೇಕು ಹಾಗೂ ತಕ್ಷಣ ಜಾರಿಗೊಳಿಸಬೇಕು.
ಈ ಕಾರಣಕ್ಕೆ ದಿನಾಂಕ: 06.02.2023 ರಿಂದ ಅನಿರ್ಧಿಷ್ಠಾವಧಿ ಮುಷ್ಕರ ಮಾಡಲು ನಮ್ಮ ಸಂಘಟನೆ ಅನಿವಾರ್ಯವಾಗಿದೆ ಮತ್ತು ಮುಷ್ಕರ ನಡೆಸಲು ಸರ್ಕಾರವೆ ನೇರ ಹೊಣೆಯಾಗಿದ್ದು ಕಾರಣ ಹೋರಾಟ ಜಾರಿಯಲ್ಲಿದೆ ಇದಕ್ಕೂ ಸರಕಾರ ಸ್ಪಂದಿಸದೆ ಇದ್ದಲ್ಲಿ ಮಾನ್ಯ ಮುಖ್ಯಮಂತ್ರಿಗಳ ಹಾಗೂ ಮಾನ್ಯ ಆರೋಗ್ಯ ಸಚಿವರ ರವರ ಮನೆ ಮುತ್ತಿಗೆ ಸೇರಿದಂತೆ ಮತ್ತಷ್ಟು ತೀವ್ರ ಸ್ವರಪದ ಹೋರಾಟ ನಡೆಸಲಾಗುವುದು. ಒಂದು ವೇಳೆ ಈ ಸಮಯದಲ್ಲಿ ಸಾರ್ವಜನಿಕರಿಗೆ ಆಗುವ ಆರೋಗ್ಯ ಸೇವೆಗಳ ವ್ಯತ್ಯಯಕ್ಕೆ ನೇರವಾಗಿ ಸರ್ಕಾರ ಮತ್ತು ಮಾನ್ಯ ಸಚಿವರು, ಆರೋಗ್ಯ ಇಲಾಖೆ ಅಧಿಕಾರಿಗಳೇ ನೇರ ಹೊಣೆ ಎಂದು ತಮ್ಮ ಮೂಲಕ ಸರಕಾರದ ಗಮನಕ್ಕೆ ತರಲು ಮನವಿ ಮಾಡುತ್ತೇವೆ ಎಂದು ತಿಳಿಸಿದ್ದಾರೆ.
ಈ ವಿಳಂಬ ದೊರಣೆ ಹಾಗೂ ನೌಕರರನ್ನು ಪದೇ ಪದೇ ಬೀದಿಗೆ ಇಳಿಯುವಂತೆ ಮಾಡುತ್ತಿರುವುದನ್ನು ಸಂಘವು ಖಂಡಿಸಿಸುತ್ತದೆ, ಕೂಡಲೇ ಮಾನ್ಯ ಮುಖ್ಯಮಂತ್ರಿಗಳು ಮಧ್ಯಸ್ಥಿಕೆ ವಹಿಸಬೇಕು ಎಂದು ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಶ್ರೀಕಾಂತ್ ಸ್ವಾಮಿ ಕೋರಿದ್ದಾರೆ.