ಮಂಗಳೂರು : ಬಸವರಾಜ ಬೊಮ್ಮಾಯಿ ಅವರೇ ಬಿಜೆಪಿ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಹೇಳಿದ್ದಾರೆ. ಈ ಮೂಲಕ ಬಿಜೆಪಿಯಲ್ಲಿದ್ದ ಊಹಾಪೋಹಗಳಿಗೆ ತೆರೆ ಎಳೆದಿದ್ದಾರೆ.
ಪುತ್ತೂರಿನಲ್ಲಿ ಕ್ಯಾಂಪ್ಕೋ ಸುವರ್ಣ ಮಹೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅಮಿತ್ ಶಾ, ಬಿಜೆಪಿ ಮುಖ್ಯಮಂತ್ರಿ ಅಭ್ಯರ್ಥಿ ಕುರಿತು ಸ್ಪಷ್ಟ ಸಂದೇಶ ರವಾನಿಸಿದ್ದು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರ ಕೈ ಬಲಪಡಿಸುವಂತೆ ಕಾರ್ಯಕರ್ತರಿಗೆ ಸೂಚಿಸಿದ್ದಾರೆ.
ಬಿಜೆಪಿಯ ಮುಂದಿನ ಮುಖ್ಯಮಂತ್ರಿ ಅಭ್ಯರ್ಥಿ ಕುರಿತಂತೆ ವಿಪಕ್ಷಗಳು ಎತ್ತಿರುವ ದ್ವನಿಗೆ ಪೂರ್ಣ ವಿರಾಮ ಹಾಕಿರುವ ಅಮಿತ್ ಶಾ ಅವರು ರಾಜ್ಯ ಬಿಜೆಪಿಯ ಮುಖ್ಯಮಂತ್ರಿ ಅಭ್ಯರ್ಥಿಯಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಹೇಳಿದ್ದಾರೆ.
ಮಂಗಳೂರು ಬಂದರಿನ ಅಭಿವೃದ್ಧಿಗೆ ನಾವು ಪಣ ತೊಟ್ಟಿದ್ದೇವೆ. 2.5 ಸಾವಿರ ಕೋಟಿ ವೆಚ್ಚದ 5 ಯೋಜನೆಗಳನ್ನು ಕೈಗೆತ್ತಿಕೊಂಡಿದ್ದೇವೆ. ಹಾಗಾಗಿ,ನೀವು ಜೆಡಿಎಸ್‌ಗೆ ಮತ ಹಾಕಿದರೆ ಕಾಂಗ್ರೆಸ್‌ಗೆ ಮತ ಹಾಕಿದಂತೆ. ಬಿಜೆಪಿಗೆ ಮತ ಹಾಕಿದರೆ ನವಭಾರತ, ನವ ಕರ್ನಾಟಕ ನಿರ್ಮಾಣಕ್ಕಾಗಿ ಮತ ಚಲಾಯಿಸಿದಂತೆ ಎಂದರು.
ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಾಗಲೆಲ್ಲಾ ಕರ್ನಾಟಕಕ್ಕೆ ಬಲ ಬಂದಿದೆ. ಗಣನೀಯವಾಗಿ ಅಭಿವೃದ್ಧಿ ಸಾಧಿಸಿದೆ. ಈ ನಾಡಿನ ಕೃಷಿಕರ ಬದುಕನ್ನು ಹಸನು ಮಾಡಲು ಮಾಜಿ ಮುಖ್ಯಮಂತ್ರಿಗಳಾದ ಶ್ರೀ ಬಿ. ಎಸ್. ಯಡಿಯೂರಪ್ಪ ಅವರು ಕೈಗೊಂಡ ಉಪಕ್ರಮಗಳನ್ನು ಇಡೀ ದೇಶವೇ ಸ್ಮರಿಸುತ್ತಿದೆ ಎಂದು ಹೇಳಿದ್ದಾರೆ.