ಬೆಂಗಳೂರು: ಲಂಚ ಪಡೆದು ಎಸ್ಕೇಪ್ ಆಗುತ್ತಿದ್ದ ಅಧಿಕಾರಿಯನ್ನು ಸಿನಿಮಾ ಶೈಲಿಯಲ್ಲಿ ಚೇಸ್ ಮಾಡಿ ಲೋಕಾಯುಕ್ತ ಅಧಿಕಾರಿಗಳು ಅರೆಸ್ಟ್ ಮಾಡಿದ್ದಾರೆ. ನೆಲಮಂಗಲ ಬಳಿಕ ಸೊಂಡೇಕೊಪ್ಪದಲ್ಲಿ ಈ ಘಟನೆ ನಡೆದಿದೆ. ರಂಗಧಾಮಯ್ಯ ಎನ್ನುವ ವ್ಯಕ್ತಿ ಕೆಜಿ ಸರ್ಕಲ್ ಬಳಿ ಇರುವ ತಾಲೂಕು ಕಚೇರಿಯಲ್ಲಿ ಫುಡ್ ಇನ್‌ಸ್ಪೆಕ್ಟರ್ ಆಗಿರುವ ಮಹಂತೇಗೌಡ ಬಳಿ ಟ್ರೇಡ್ ಲೈಸೆನ್ಸ್ ಮಾಡಿಸಲು ತೆರಳಿದ್ದರು. ಲೈಸೆನ್ಸ್ ಕೊಡಲು ಅಧಿಕಾರಿ 1 ಲಕ್ಷ ರೂಪಾಯಿ ಹಣಕ್ಕೆ ಬೇಡಿಕೆ ಇಟ್ಟಿದ್ದರು. ಅಧಿಕಾರಿ ಲಂಚ ಕೇಳಿದ ಬಗ್ಗೆ ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದಾರೆ. ಮಹಂತೇಗೌಡನನ್ನು ಬಲೆಗೆ ಬೀಳಿಸಲು ಲೋಕಾಯುಕ್ತ ಪೊಲೀಸರು ಬಲೆ ಬೀಸಿದ್ದರು. ಮುಂಗಡವಾಗಿ 43 ಸಾವಿರ ರೂಪಾಯಿ ಹಣ ಪಡೆಯುವಾಗ ಲೋಕಾಯುಕ್ತ ಅಧಿಕಾರಿಗಳ ಬಲೆಗೆ ಬಿದ್ದಿದ್ದಾರೆ. ಲಂಚ ಪಡೆಯುವ ಬಗ್ಗೆ ಮಾಹಿತಿ ಪಡೆದ ಅಧಿಕಾರಿಗಳು ಹಣ ಪಡೆಯುವ ಸಂದರ್ಭದಲ್ಲಿ ಮಹಂತೇಗೌಡ ಅವರನ್ನು ಬಂಧಿಸಲು ಯತ್ನಿಸಿದ್ದಾರೆ. ಟ್ಯ್ರಾಪ್‌ನಲ್ಲಿ ಸಿಕ್ಕಿಕೊಂಡಿರುವ ಬಗ್ಗೆ ಅನುಮಾನ ಬರುತ್ತಿದ್ದಂತೆ ಫುಡ್ ಇನ್‌ಸ್ಪೆಕ್ಟರ್ ಮಹಂತೇಗೌಡ ಪರಾರಿಯಾಗಲು ಯತ್ನಿಸಿದ್ದಾರೆ. ಹಣ ಪಡೆದು ತನ್ನ ಕಾರಿನಲ್ಲಿ ಸುಮಾರು 15 ಕಿಮೀ ತೆರಳಿದ್ದಾರೆ. ಅಧಿಕಾರಿಯನ್ನು ಬೆನ್ನಟ್ಟಿದ ಲೋಕಾಯುಕ್ತ ಪೊಲೀಸರು ಕೊನೆಗೆ ಮಹಾಂತೇಶನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಮಹಂತೇಗೌಡನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ತಾನು ತಪ್ಪಿಸಿಕೊಳ್ಳಲು ಲೋಕಾಯುಕ್ತ ಪೊಲೀಸರ ಮೇಲೆ ಕಾರು ಹರಿಸಲು ಯತ್ನಿಸಿರುವ ಆರೋಪ ಕೂಡ ಕೇಳಿಬಂದಿದೆ. ಘಟನೆ ಸಂಬಂಧ ನೆಲಮಂಗಲ ಟೌನ್ ಪೊಲೀಸ್ ಠಾಣೆಗೆ ಲೋಕಾಯುಕ್ತ ಅಧಿಕಾರಿಗಳು ದೂರು ದಾಖಲಿಸಿದ್ದಾರೆ. ದೂರಿನ ಅನ್ವಯ ಕೊಲೆ ಯತ್ನ ಪ್ರಕರಣ ಕೂಡ ದಾಖಲಿಸಲಾಗಿದೆ. ಸದ್ಯ ಮಹಾಂತೇಶ್ ಲೋಕಾಯುಕ್ತ ಪೊಲೀಸರ ವಶದಲ್ಲಿದ್ದು ಆತನ ಭ್ರಷ್ಟಾಚಾರದ ಬಗ್ಗೆ ಹೆಚ್ಚಿನ ಮಾಹಿತಿ ಕಲೆಹಾಕುತ್ತಿದ್ದಾರೆ.