ಬಂಟ್ವಾಳ: ಬಂಟ್ವಾಳ ತಾಲ್ಲೂಕಿನ ವಿಟ್ಲದ ಖಾಸಗಿ ಶಾಲೆಯ ವಾರ್ಷಿಕೋತ್ಸವ ಕಾರ್ಯಕ್ರಮವೊಂದರಲ್ಲಿ ಪ್ರೌಢಶಾಲೆಯ ವಿದ್ಯಾರ್ಥಿಗಳು ಕಾಂತಾರ ಚಿತ್ರದ ದೈವಾರಾಧನೆಯ ಸನ್ನಿವೇಶವನ್ನು ಛದ್ಮವೇಶದ ಮೂಲಕ ಪ್ರದರ್ಶಿಸಿದಕ್ಕೆ ತೀವ್ರ ಆಕ್ರೋಶ ವ್ಯಕ್ತವಾಗಿದೆ.
ರಿಷಬ್ ಶೆಟ್ಟಿ ಅಭಿನಯದ ಕಾಂತಾರ ಚಲನಚಿತ್ರ ಇನ್ನಿಲ್ಲದಂತೆ ಯಶಸ್ವಿ ಕಂಡ ಬಳಿಕ ಎಲ್ಲೆಡೆ ದೈವಾರಾಧನೆ, ಭೂತಾರಾಧನೆ ಬಗ್ಗೆ ಜನತೆಗೆ ಒಲವು ಜಾಸ್ತಿಯಾಗಿದೆ. ಇದೇ ವೇಳೆ ಕೆಲವರು ಭೂತಾರಾಧನೆಯ ವೇಷ ಹಾಕಿಕೊಂಡು ವೇದಿಕೆಗೆ ಏರಿ ದೈವಕ್ಕೆ ಅಪಚಾರ ಎಸಗುವ ಕೆಲಸ ಮಾಡುತ್ತಿದ್ದಾರೆ.ಟಿವಿಗಳಲ್ಲಿನ ರಿಯಾಲಿಟಿ ಶೋಗಳಲ್ಲಿ ಕಾಂತಾರ ಚಲನಚಿತ್ರದಲ್ಲಿ ಕಾಣುವ ಪಂಜುರ್ಲಿಯಂತೆ ವೇಷಧರಿಸಿ ಹಾಡು ಹಾಕಿ ಕುಣಿದು ಚಪ್ಪಾಳೆ ಗಿಟಿಸುವುದಕ್ಕೆ ದೈವಾರಾಧಕರು ಹಾಗೂ ತುಳುನಾಡಿನ ಜನತೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದೀಗ ಖಾಸಗಿ ಶಾಲೆಯ ಬಾಲಕನೊಬ್ಬ ಕೈಯಲ್ಲಿ ದೈವದ ಆಯುಧವನ್ನು ಹಿಡಿದುಕೊಂಡು ನರ್ತಿಸುವ ಸನ್ನಿವೇಶವನ್ನು ನೆರೆದ ಪುಟ್ಟ ಮಕ್ಕಳು ಹಾಗೂ ಶಿಕ್ಷಕರು ಕೈಚಪ್ಪಾಳೆ ತಟ್ಟಿ ಪ್ರೋತ್ಸಾಹಿಸುತ್ತಿರುವುದು ಕೂಡಾ ಕಂಡು ಬಂದಿದೆ. ಒಟ್ಟಿನಲ್ಲಿ ಪೂಜ್ಯ ಭಾವನೆಯಿಂದ ಕಾಣಬೇಕಾದ ದೈವದ ನರ್ತನವನ್ನು ಶಾಲಾ ಕಾಲೇಜಿನ ವೇದಿಕೆಗಳಲ್ಲೂ ತಂದಿರುವುದಕ್ಕೆ ಕೆಲವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.