ಮಂಜೇಶ್ವರ: ನಕಲಿ ಔಷಧಿ ತಯಾರಿಸುವುದರೊಂದಿಗೆ ಚಿಕಿತ್ಸೆಯನ್ನೂ ನೀಡುತ್ತಿದ್ದ ಆರೋಪ ಮೇಲೆ ನಕಲಿ ವೈದ್ಯನನ್ನು ಮಂಜೇಶ್ವರ ಪೊಲೀಸರು ಬಂಧಿಸಿದ್ದಾರೆ. ಬಂಧಿತ ನಕಲಿ ವೈದ್ಯನನ್ನು ಪಾಲಕ್ಕಾಡ್ ಮರ್ಣ್ಣಾಕಾಡ್ ಕಳರಿಕ್ಕಲ್ ನಿವಾಸಿ ಸಿ.ಎಂ. ಜಮಾಲುದ್ದೀನ್ (56) ಎಂದು ಗುರುತಿಸಲಾಗಿದೆ. ಇತನನ್ನು ಮಂಜೇಶ್ವರ ಎಸ್‌ಐ ಕೆ.ವಿ. ಸುಮೇಶ್‌ರಾಜ್ ಉಪ್ಪಳ ಪಚ್ಚಂಪಾರೆಯಿಂದ ಬಂಧಿಸಲಾಗಿದೆ. ಪಚ್ಲಂಪಾರೆಯಲ್ಲಿ ಫ್ರೆಂಡ್ಸ್ ಕ್ಲಬ್‌ನಲ್ಲಿ ಜಮಾಲುದ್ದೀನ್‌ನ ನೇತೃತ್ವದಲ್ಲಿ ಶಿಬಿರ ನಡೆಸಲಾಗಿತ್ತು. ಯಾವುದೇ ಅರ್ಹತೆಯೋ, ದಾಖಲೆ ಪತ್ರಗಳೂ ಇಲ್ಲದೆ ರೋಗಿಗಳನ್ನು ತಪಾಸಣೆ ನಡೆಸಿ ಔಷಧಿ ನೀಡಿದನೆಂಬ ಆರೋಪದಂತೆ ಈತನನ್ನು ಬಂಧಿಸಲಾಗಿದೆ. ನಕಲಿ ವೈದ್ಯ ವೈದ್ಯಕೀಯ ಶಿಬಿರ ನಡೆಸುತ್ತಿರುವ ಬಗ್ಗೆ ಜಿಲ್ಲಾ ಮೆಡಿಕಲ್ ಆಫೀಸರ್ ಕೆ. ಸಂತೋಷ್‌ರಿಗೆ ಮಾಹಿತಿ ಲಭಿಸಿತ್ತು. ಈ ಕುರಿತು ತನಿಖೆ ನಡೆಸಲು ಡೆಪ್ಯುಟಿ ಜಿಲ್ಲಾ ಮೆಡಿಕಲ್ ಆಫೀಸರ್‌ರಿಗೆ ಹೊಣೆಗಾರಿಕೆ ನೀಡಲಾಗಿದೆ. ಜಿಲ್ಲಾ ಮೆಡಿಕಲ್ ಆಫೀಸರ್ ಸ್ಥಳಕ್ಕೆ ಧಾವಿಸಿ ನಡೆಸಿದ ಪರಿಶೀಲನೆಯಲ್ಲಿ ಜಮಾಲುದ್ದೀನ್‌ಗೆ ಯಾವುದೇ ವೈದ್ಯಕೀಯ ಅರ್ಹತೆ ಇಲ್ಲದಿರುವುದು ದೃಢವಾಗಿದೆ. ಅನಂತರ ಡಿಎಂಓ ಮಂಜೇಶ್ವರ ಪೊಲೀಸರಿಗೆ ದೂರು ನೀಡಿದ್ದಾರೆ. ಜಮಾಲುದ್ದೀನ್ ವಿರುದ್ಧ ಬೇರೆಲ್ಲಾದರೂ ಕೇಸುಗಳಿವೆಯೇ ಎಂದು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.