ಉಳ್ಳಾಲ : ಕೊಲ್ಯ ಸಮೀಪದ ಕನೀರುತೋಟದಲ್ಲಿ ಶೇಂದಿ ತೆಗೆಯುತ್ತಿದ್ದ ವೇಳೆ ತೆಂಗಿನ ಮರದಿಂದ ಆಯತಪ್ಪಿ ಬಿದ್ದು ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ಇಂದು ಬೆಳಗ್ಗೆ ನಡೆದಿದೆ.

ಮೃತರನ್ನು ಕೊಲ್ಯ ಕನೀರುತೋಟದ ಬಲ್ಯ ನಡುಪೊಲಿಕೆ ನಿವಾಸಿ ಯಶೋಧರ್ (46) ಎಂದು ಗುರುತಿಸಲಾಗಿದೆ.ಯಶೋಧರ್ ಅವರು ಇಂದು ಬೆಳಗ್ಗೆ ತನ್ನ ಮನೆ ಸಮೀಪದ ತೋಟವೊಂದರ ಬಳಿ ಶೇಂದಿ ತೆಗೆಯುತ್ತಿದ್ದಾಗ ಆಯತಪ್ಪಿ ತೆಂಗಿನ ಮರದಿಂದ ಕೆಳಗೆ ಬಿದ್ದಿದ್ದಾರೆ.
ಪರಿಣಾಮ ಗಂಭೀರವಾಗಿ ಗಾಯಗೊಂಡಿದ್ದ ಅವರನ್ನು ಕೂಡಲೆ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ದಾರಿ ಮಧ್ಯೆಯೇ ಕೊನೆಯುಸಿರೆಳೆದಿದ್ದಾರೆ.ಹಲವು ವರ್ಷಗಳಿಂದ ಯಶೋಧರ್ ಶೇಂದಿ ತೆಗೆಯುವ ಕೆಲಸ ಮಾಡುತ್ತಿದ್ದರು.
ಈ ಹಿಂದೆ ಕೆಲಸದ ವೇಳೆ ಕಡಿಮೆ ರಕ್ತದೊತ್ತಡದಿಂದಾಗಿ ಅವರು ಪ್ರಜ್ಞೆ ತಪ್ಪಿ ಬಿದ್ದಿದ್ದರು. ಹೀಗಾಗಿ ಈಗಲೂ ಅದೇ ಕಾರಣದಿಂದ ಆಯತಪ್ಪಿ ಬಿದ್ದಿರಬಹುದು ಎಂದು ಶಂಕಿಸಲಾಗಿದೆ.ಮೃತರು ಪತ್ನಿ, ಪುತ್ರ ಮತ್ತು ಪುತ್ರಿಯನ್ನು ಅಗಲಿದ್ದಾರೆ. ಯಶೋಧರ್ ತಮ್ಮ ಕುಟುಂಬದ ಆಧಾರಸ್ತಂಭವಾಗಿದ್ದರು.