ಚಿಕ್ಕಮಗಳೂರು: ನೂತನ ಶಾಸಕರ ಅಭಿನಂದನಾ ಕಾರ್ಯಕ್ರಮದ ವೇಳೆ ಯುವಕನೊಬ್ಬ ಬರ್ಬರ ಹತ್ಯೆಯಾಗಿರುವ ಆತಂಕಕಾರಿ ಘಟನೆ ತರೀಕೆರೆ ಪಟ್ಟಣದಲ್ಲಿ ನಿನ್ನೆ (ಜೂ.3) ನಡೆದಿದೆ.ವರುಣ್ (28) ಕೊಲೆಯಾದ ಯುವಕ. ಶಾಸಕರ ಅಭಿನಂದನಾ ಸಮಾರಂಭ ಹಿನ್ನೆಲೆಯಲ್ಲಿ ಆರ್ಕೆಸ್ಟ್ರಾ ಹಮ್ಮಿಕೊಳ್ಳಲಾಗಿತ್ತು.
ಈ ವೇಳೆ ಹಾಡು ಬದಲಿಸುವ ವಿಚಾರಕ್ಕೆ ನಡೆದ ಗಲಾಟೆಯಲ್ಲಿ ಕಿಡಿಗೇಡಿಯೊಬ್ಬ ವರುಣ್ಗೆ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ. ಮಂಜು ಹಾಗೂ ಸಂಜು ಎಂಬುವರಿಗೆ ಗಾಯಗಳಾಗಿವೆ.
ಕಬಾಬ್ ಮೂರ್ತಿಯಿಂದ ಕೃತ್ಯ
ಘಟನೆಯ ವಿವರಣೆಗೆ ಬರುವುದಾದರೆ, ತರೀಕೆರೆ ಶಾಸಕ ಜಿ.ಎಚ್. ಶ್ರೀನಿವಾಸ್ ಅವರು ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಗೆಲುವು ಸಾಧಿಸಿದ ಹಿನ್ನೆಲೆಯಲ್ಲಿ ಅವರ ಅಭಿಮಾನಿಗಳು ಅಭಿನಂದನಾ ಸಮಾರಂಭವನ್ನು ಏರ್ಪಡಿಸಿದ್ದರು. ಆರ್ಕೆಸ್ಟ್ರಾ ತಂಡವನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಿದ್ದರು. ಈ ವೇಳೆ ಹಾಡು ಬದಲಿಸುವ ವಿಚಾರಕ್ಕೆ ಆರೋಪಿ ಕಬಾಬ್ ಮೂರ್ತಿ ಹಾಗೂ ವರುಣ್ ಮಧ್ಯೆ ವಾಗ್ವಾದ ನಡೆದಿದೆ. ಮಾತಿಗೆ ಮಾತು ಬೆಳೆದು ಎರಡು ಗುಂಪುಗಳ ಮಧ್ಯೆ ಮಾರಾಮಾರಿ ಉಂಟಾಗಿದೆ.
ಹೊಟ್ಟೆ, ಪಕ್ಕೆಲುಬಿಗೆ ಇರಿತ
ಇತ್ತ ಆರ್ಕೆಸ್ಟ್ರಾ ಮುಗಿಯುತ್ತಿದ್ದಂತೆ ಆಕ್ರೋಶಭರಿತ ಕಬಾಬ್ ಮೂರ್ತಿ, ವರುಣ್ನ ಹೊಟ್ಟೆ ಹಾಗೂ ಪಕ್ಕೆಲುಬಿಗೆ ಚಾಕು ಇರಿದು ಪರಾರಿಯಾಗಿದ್ದಾನೆ. ರಕ್ತಸ್ರಾವದಿಂದ ಒದ್ದಾಡುತ್ತಿದ್ದ ವರುಣ್ನನ್ನು ಕೂಡಲೇ ಶಿವಮೊಗ್ಗದ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ವರುಣ್ ಮೃತಪಟ್ಟಿದ್ದಾನೆ. ಮಂಜು ಹಾಗೂ ಸಂಜು ಎಂಬವರ ಕೈ ಹಾಗೂ ಕಾಲಿಗೂ ಕಬಾಬ್ ಮೂರ್ತಿ ಚಾಕು ಇರಿದಿದ್ದಾನೆ.
ಘಟನಾ ಸ್ಥಳಕ್ಕೆ ಚಿಕ್ಕಮಗಳೂರು ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಘಟನೆ ಸಂಬಂಧ ತರೀಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.