ಕೋಲ್ಕತ: ಚಿಕಿತ್ಸೆಗೆ ಹೆದರಿ ಅವಿತು ಕೂತ ರೋಗಿಯೊಬ್ಬ ಆಸ್ಪತ್ರೆಯ ಏಳನೇ ಮಹಡಿಯಿಂದ ಕೆಳಕ್ಕೆ ಬಿದ್ದಿದ್ದಾನೆ. ನೆಲಕ್ಕೆ ಬೀಳುವ ಮೊದಲು ಕಟ್ಟಡದ ಗೋಡೆಯ ಅಂಚಿಗೆ ಎರಡು ಸಲ ತಾಗಿದ್ದರಿಂದ ಈತನ ತಲೆಬುರುಡೆ, ಪಕ್ಕೆಲುಬು ಮತ್ತು ಕೈಗಳಿಗೆ ಗಂಭಿರ ಗಾಯಗಳಾಗಿವೆ.
ಪಶ್ಚಿಮಬಂಗಾಳದ ಕೋಲ್ಕತದ ಮುಲ್ಲಿಕ್ಬಜಾರ್ ಎಂಬಲ್ಲಿನ ಖಾಸಗಿ ಮಾನಸಿಕ ಆಸ್ಪತ್ರೆಯೊಂದರಲ್ಲಿ ಈ ಅವಘಡ ಸಂಭವಿಸಿದೆ. ಸುಜಿತ್ ಅಧಿಕಾರಿ ಎಂಬಾತನೇ ಕೆಳಕ್ಕೆ ಬಿದ್ದ ರೋಗಿ. ಈತ ಚಿಕಿತ್ಸೆಯಿಂದ ತಪ್ಪಿಸಿಕೊಳ್ಳುವ ಸಲುವಾಗಿ ಶನಿವಾರ ಬೆಳಗ್ಗೆ ಏಳನೇ ಮಹಡಿಯಲ್ಲಿದ್ದ ವಾರ್ಡ್ನ ಕಿಟಕಿಯಿಂದ ಹೊರಗೆ ಬಂದು ಅಂಚಿನಲ್ಲಿ ಸುಮಾರು ಎರಡು ಗಂಟೆ ಕೂತಿದ್ದ.
ಹೈಡ್ರಾಲಿಕ್ ಏಣಿ ಬಿಟ್ಟು ಅದರಿಂದ ಇಳಿ ಎಂದರೂ ಇಳಿಯದ ಈತನನ್ನು ರಕ್ಷಿಸಲು ಆಸ್ಪತ್ರೆಯವರು ಹಾಗೂ ಇತರರು ಎಷ್ಟೇ ಮನವೊಲಿಸಲು ಯತ್ನಿಸಿದರೂ ಪ್ರಯೋಜನ ಆಗಲಿಲ್ಲ. ಬಳಿಕ ರಕ್ಷಣಾ ತಂಡದವರು ಕೆಳಗ್ಗೆ ನೆಟ್ ಹಾಕಿ ಈತನನ್ನು ಬಚಾವ್ ಮಾಡಲು ಪ್ರಯತ್ನಿಸಿದ್ದರು. ಅಷ್ಟರಲ್ಲಿ ಆತ ಕೈಜಾರಿ ಕೆಳಕ್ಕೆ ಬಿದ್ದಿದ್ದು, ಬೀಳುವ ಎರಡು ಕಡೆ ಕಟ್ಟಡದ ಭಾಗ ತಾಗಿದ್ದು, ತಲೆಬುರುಡೆ ಪಕ್ಕೆಲುಬು, ಕೈಗಳು ಗಂಭೀರವಾಗಿ ಗಾಯಗೊಂಡಿವೆ. ಈತನನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಪರಿಸ್ಥಿತಿ ಚಿಂತಾಜನಕವಾಗಿದೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.