ಬೆಂಗಳೂರು: ರೌಡಿ ಶೀಟ್ನಲ್ಲಿ ಫೈಟರ್ ರವಿ ಅಲಿಯಾಸ್ ಬಿ.ಎಂ. ಮಲ್ಲಿಕಾರ್ಜುನ ಅವರ ಹೆಸರನ್ನು ಮುಂದುವರಿಸುವುದಕ್ಕೆ ಹೈಕೋರ್ಟ್ ತಡೆ ನೀಡಿದೆ.
ರೌಡಿ ಶೀಟ್ನಿಂದ ಹೆಸರು ಕೈಬಿಡಲು ನಿರಾಕರಿಸಿದ್ದ ಪೊಲೀಸ್ ಇಲಾಖೆಯ ಕ್ರಮವನ್ನು ಪ್ರಶ್ನಿಸಿ ಮಲ್ಲಿಕಾರ್ಜುನ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಆದೇಶ ನೀಡಿದೆ.
ಈ ಮೊದಲು ಮಲ್ಲಿಕಾರ್ಜುನ ಅವರು ತಮ್ಮ ಹೆಸರನ್ನು ರೌಡಿ ಶೀಟ್ನಲ್ಲಿ ಸೇರಿಸಿರುವುದನ್ನು ಪ್ರಶ್ನಿಸಿ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು. 2019ರಲ್ಲಿ ಈ ಅರ್ಜಿ ವಿಚಾರಣೆ ನಡೆಸಿದ್ದ ಹೈಕೋರ್ಟ್, ‘ರೌಡಿ ಶೀಟ್ನಿಂದ ಮಲ್ಲಿಕಾರ್ಜುನ ಅವರ ಹೆಸರು ತೆಗೆಯುವ ಕುರಿತಾದ ಮನವಿಯನ್ನು ಪರಿಗಣಿಸಿ’ ಎಂದು ಪೊಲೀಸ್ ಇಲಾಖೆಗೆ ನಿರ್ದೇಶಿಸಿತ್ತು.
ಆದರೆ, ಮಲ್ಲಿಕಾರ್ಜುನ ಅವರು ಸಲ್ಲಿಸಿದ್ದ ಮನವಿಯನ್ನು ಪೊಲೀಸ್ ಇಲಾಖೆ 2020ರಲ್ಲಿ ತಿರಸ್ಕರಿಸಿ, ರೌಡಿಶೀಟ್ನಲ್ಲಿ ಹೆಸರನ್ನು ಮುಂದುವರಿಸಿತ್ತು. ಇದನ್ನು ಆಕ್ಷೇಪಿಸಿ ಮಲ್ಲಿಕಾರ್ಜುನ ಇದೇ 5ರಂದು ಮತ್ತೆ ರಿಟ್ ಅರ್ಜಿ ಸಲ್ಲಿಸಿದ್ದರು.
‘ಈ ಹಿಂದೆ ನನ್ನ ವಿರುದ್ಧ ದಾಖಲಾಗಿದ್ದ ಆರು ಅಪರಾಧ ಪ್ರಕರಣಗಳನ್ನು ಹೈಕೋರ್ಟ್ ಈಗಾಗಲೇ ರದ್ದುಪಡಿಸಿದೆ. ಮತ್ತೊಂದು ಪ್ರಕರಣದ ತನಿಖೆಗೆ ಹೈಕೋರ್ಟ್ ತಡೆ ಆದೇಶವಿದೆ. ಹೀಗಾಗಿ, ಸದ್ಯ ನನ್ನ ವಿರುದ್ಧ ಯಾವುದೇ ಪ್ರಕರಣ ದಾಖಲಾಗಿಲ್ಲ. ಅದರೂ ಪ್ರತಿ ವರ್ಷ ರೌಡಿ ಶೀಟ್ನಲ್ಲಿ ನನ್ನ ಹೆಸರನ್ನು ಮುಂದುವರಿಸಲಾಗುತ್ತಿದೆ’ ಎಂದು ಮಲ್ಲಿಕಾರ್ಜುನ ರಿಟ್ ಅರ್ಜಿಯಲ್ಲಿ ಆಕ್ಷೇಪಿಸಿದ್ದರು.