ವಿಟ್ಲ: ಬಸ್ಸಿನಲ್ಲಿ ವಿದ್ಯಾರ್ಥಿನಿ ಜತೆ ಮಾತನಾಡಿದ ವಿಚಾರವಾಗಿ ತಂಡವೊಂದು ಅನ್ಯ ಕೋಮಿನ ವಿದ್ಯಾರ್ಥಿಗೆ ಹಲ್ಲೆ ನಡೆಸಿದ್ದು, ಈ ಬಗ್ಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವೀರಕಂಬ ಗ್ರಾಮದ ಮಂಗಳಪದವು ನಿವಾಸಿ ಖಲಂದರ್ ಅಬ್ಬಾಸ್ ಅವರ ಪುತ್ರ ಮಹಮ್ಮದ್ ಶಾಕೀರ್ ಎಂಬವರು ನೀಡಿದ ದೂರಿನಂತೆ ಕೆಲಿಂಜ ನಿವಾಸಿಗಳಾದ ಚಂದ್ರಶೇಖರ, ಪ್ರಜ್ವಲ್, ರೋಹಿತ್, ಇತರ ಮೂವರ ವಿರುದ್ಧ ಪ್ರಕರಣ ದಾಖಲಾಗಿದೆ. ಶಾಕೀರ್ ಮಂಗಳೂರು ಬಲ್ಮಠ ಎಂಬಲ್ಲಿರುವ ಯೆನಪೋಯ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡಿಕೊಂಡಿದ್ದು ಜ. 12ರಂದು ಕಾಲೇಜು ಮುಗಿಸಿ ಕೆ.ಎಸ್.ಆರ್.ಟಿ.ಸಿ ಬಸ್ಸಿನಲ್ಲಿ ಮನೆಗೆ ಬರುತ್ತಿದ್ದಾಗ ಈತ ಕುಳಿತುಕೊಂಡಿದ್ದ ಪಕ್ಕದ ಸೀಟಿನಲ್ಲಿ ಕುಳಿತಿದ್ದ ವಿದ್ಯಾರ್ಥಿನಿಗೆ ಚಾಕಲೇಟು ಬೇಕೆ ಎಂದು ಕೇಳಿದ್ದರು. ವೀರಕಂಭ ಗ್ರಾಮದ ಕೆಲಿಂಜ ಎಂಬಲ್ಲಿಗೆ ಬಸ್ ತಲುಪಿದಾಗ ಏಕಾಏಕಿಯಾಗಿ ಬಸ್ಸಿನೊಳಗೆ ಬಂದ ಚಂದ್ರಶೇಖರ, ಪ್ರಜ್ವಲ್, ರೋಹಿತ್ ಹಾಗೂ ಮೂವರು ಸೇರಿಕೊಂಡು ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿ ಶಾಕೀರ್ ವಿಟ್ಲ ಠಾಣಾ ಪೊಲೀಸರಿಗೆ ದೂರು ನೀಡಿದ್ದಾರೆ. ಈ ಬಗ್ಗೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.