ಬಂಟ್ವಾಳ: ಸಾರ್ವಜನಿಕರ ಸುಗಮ ಸಂಚಾರಕ್ಕೆ ಅಡ್ಡಿಪಡಿಸಿ, ಸಂಚಾರಿ ನಿಯಮಗಳನ್ನು ಉಲ್ಲಂಘಿಸಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಟ್ರಾಫಿಕ್ ಜಾಮ್ ಸಮಸ್ಯೆ ಕಾರಣವಾದ ಕಂಪೆನಿಯ ಗುತ್ತಿಗೆದಾರರ ವಿರುದ್ಧ ಬಂಟ್ವಾಳ ಮೆಲ್ಕಾರ್ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬಿಸಿರೋಡು – ಅಡ್ಡಹೊಳೆ ರಾಷ್ಟ್ರೀಯ ಹೆದ್ದಾರಿ ಚತುಷ್ಪತ ಕಾಮಗಾರಿ ವಹಿಸಿಕೊಂಡ ಕಂಪೆನಿ ಗುತ್ತಿಗೆದಾರ ಹಾಗೂ ಎರಡು ಲಾರಿ ಮತ್ತು ಒಂದು ರೋಲರ್ ಮೇಲೆ ಪ್ರಕರಣ ದಾಖಲಾಗಿದೆ.
ಸೋಮವಾರ ಮಧ್ಯಾಹ್ನದ ವೇಳೆ ಪಾಣೆಮಂಗಳೂರು ಮತ್ತು ಮೆಲ್ಕಾರ್ ಎಂಬಲ್ಲಿ ಯಾವುದೇ ಸೂಚನಾ ಫಲಕ ಅಳವಡಿಸದೆ, ಟ್ರಾಫಿಕ್ ಪೊಲೀಸರಿಗೂ ಯಾವುದೇ ಮಾಹಿತಿ ನೀಡದೆ ಡಾಮರೀಕರಣ ಮಾಡುವ ನೆಪದಲ್ಲಿ ಎರಡು ಲಾರಿ ಹಾಗೂ ಒಂದು ರೋಲರ್ ನ್ನು ರಸ್ತೆ ಮಧ್ಯೆ ಇಟ್ಟು ಸಂಚಾರಕ್ಕೆ ಅಡಚಣೆ ಮಾಡಿದ್ದರು.
ನಿಯಮ ಉಲ್ಲಂಘನೆ ಮಾಡಿ ಕಾಮಗಾರಿ ನಡೆಸುತ್ತಿದ್ದು, ಸಾರ್ವಜನಿಕ ಸಂಚಾರಕ್ಕೆ ಅಡಚಣೆ ಉಂಟಾದ ಹಿನ್ನೆಲೆಯಲ್ಲಿ ಕಾಮಗಾರಿ ಗುತ್ತಿಗೆ ವಹಿಸಿಕೊಂಡ ಕಂಟ್ರಾಕ್ಟರ್ ಮೇಲೆ ಪ್ರಕರಣ ದಾಖಲಾಗಿದೆ.