ಕಾಸರಗೋಡು: ಕಳಿಯಾಟ ಮಹೋತ್ಸವ ಸಂದರ್ಭದಲ್ಲಿ ಪಟಾಕಿ ದುರಂತ ಸಂಭವಿಸಿ 154 ಮಂದಿ ಗಾಯಗೊಂಡಿರುವ ಘಟನೆ ಕೇರಳದ ಕಾಸರಗೋಡು ಜಿಲ್ಲೆಯಲ್ಲಿ ನಡೆದಿದೆ.
ನೀಲೇಶ್ವರಂನ ವೀರರ್ಕಾವು ದೇವಸ್ಥಾನದ ಉತ್ಸವದ ವೇಳೆ ಈ ದುರ್ಘಟನೆ ಸಂಭವಿಸಿದೆ. ಸಾಂಪ್ರದಾಯಿಕ ತೆಯ್ಯಂ ಉತ್ಸವಕ್ಕಾಗಿ ಮಧ್ಯರಾತ್ರಿಯ ನಂತರ ಸುಮಾರು 1,500 ಮಂದಿ ದೇವಸ್ಥಾನದಲ್ಲಿ ಜಮಾಯಿಸಿದ್ದರು. ತೆಯ್ಯಂ ಪ್ರದರ್ಶನವನ್ನು ವೀಕ್ಷಿಸಲು ಬಂದಿದ್ದ ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ ಹಲವಾರು ಮಂದಿ ಗಾಯಗೊಂಡಿದ್ದಾರೆ.
ವೀರರ್ಕಾವು ದೇವಸ್ಥಾನದ ಬಳಿಯ ತಾತ್ಕಾಲಿಕ ಶೆಡ್‌ನಲ್ಲಿ ಪಟಾಕಿ ಸಂಗ್ರಹಿಸಿಡಲಾಗಿತ್ತು. ಈ ಶೆಡ್‌ಗೆ ಮೂವಳಂಕುಜಿ ಚಾಮುಂಡಿ ತೆಯ್ಯಂನ ‘ವೆಳ್ಳಟ್ಟಂ ಪುರಪ್ಪಡು’ಗೆ ಸಂಬಂಧಿಸಿದಂತೆ ಪಟಾಕಿ ಸಿಡಿಸುವ ವೇಳೆ ಈ ದುರಂತ ಸಂಭವಿಸಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಘಟನೆಯಲ್ಲಿ ಗಾಯಗೊಂಡ 154 ಮಂದಿ ಪೈಕಿ ಒಬ್ಬರ ಸ್ಥಿತಿ ಚಿಂತಾಜನಕವಾಗಿದ್ದು, 8 ಮಂದಿ ಗಂಭೀರವಾಗಿದ್ದಾರೆ. ಹಾಗೂ 97 ಮಂದಿಯನ್ನು ಕಾಸರಗೋಡು, ಕಣ್ಣೂರು ಮತ್ತು ಮಂಗಳೂರಿನ ವಿವಿಧ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.