ಮಂಗಳೂರು:ದೀಪಾವಳಿ ಮತ್ತು ತುಳಸಿ ಪೂಜೆ ಹಬ್ಬಗಳ ಸಂದರ್ಭದಲ್ಲಿ ಅಕ್ಟೋಬರ್ 30ರಿಂದ ನವೆಂಬರ್ 2ರವರೆಗೆ ಹಾಗೂ ನವೆಂಬರ್ 12 ಮತ್ತು 13 ರವರೆಗೆ ಮಂಗಳೂರು ಪೊಲೀಸ್ ಕಮೀಷನರೇಟ್ ವ್ಯಾಪ್ತಿಯಲ್ಲಿ ಪಟಾಕಿ ಸುಡುಮದ್ದು ಮಾರಾಟ ಮಾಡಲು ತಾತ್ಕಾಲಿಕ ಸುಡುಮದ್ದು ಪರವಾನಿಗೆಯನ್ನು ಪಡೆಯಲು ಅರ್ಜಿ ಆಹ್ವಾನಿಸಲಾಗಿದೆ.
ಅರ್ಜಿಗಳನ್ನು ಅಕ್ಟೋಬರ್ 4ರಿಂದ 16ರವರೆಗೆ ರೂ. 200/- ಬ್ಯಾಂಕ್ ಚಲನ್ ಮೂಲಕ ಸರಕಾರಕ್ಕೆ ಪಾವತಿಸಿ ಪಡೆದುಕೊಳ್ಳಬೇಕು. ನಿಗದಿತ ದಿನಾಂಕದ ನಂತರ ಯಾವುದೇ ಕಾರಣಕ್ಕೂ ಅರ್ಜಿಯನ್ನು ನೀಡಲಾಗುವುದಿಲ್ಲ.ಅರ್ಜಿ ಸ್ವೀಕರಿಸಿದ ನಂತರ ಅರ್ಜಿದಾರರು ಅಗ್ನಿಶಾಮಕ ಇಲಾಖೆ, ಸ್ಥಳೀಯ ಸಂಸ್ಥೆ ಹಾಗೂ ವ್ಯಾಪ್ತಿಯ ಪೊಲೀಸ್ ಠಾಣೆಯಿಂದ ನೇರವಾಗಿ ನಿರಾಕ್ಷೇಪಣಾ ಪತ್ರ ಪಡೆಯಬೇಕು. ಅರ್ಜಿ ಮತ್ತು ದಾಖಲೆಗಳನ್ನು ಅಕ್ಟೋಬರ್ 25ರೊಳಗೆ ಸಲ್ಲಿಸಬೇಕು.ಸಲ್ಲಿಸಿದ ಅರ್ಜಿಯನ್ನು ನಿಯಮಾನುಸಾರವಾಗಿ ಪರಿಶೀಲಿಸಿ ತಾತ್ಕಾಲಿಕ ಸುಡುಮದ್ದು ಪರವಾನಿಗೆಯನ್ನು ನಿಗದಿತ ಶುಲ್ಕ (ರೂ.500/-) ಬ್ಯಾಂಕ್ ಗೆ ಪಾವತಿಸಿ ಪರವಾನಿಗೆಯನ್ನು ಪಡೆಯಬೇಕು. ತಾತ್ಕಾಲಿಕ ಮಳಿಗೆಗಳನ್ನು ತೆರೆಯುವ ಸಂದರ್ಭದಲ್ಲಿ ಮೂಲ ಪರವಾನಿಗೆಯನ್ನು ಕಡ್ಡಾಯವಾಗಿ ಮಳಿಗೆಯ ಮುಂಭಾಗದಲ್ಲಿ ಸಾರ್ವಜನಿಕರಿಗೆ ಕಾಣುವಂತೆ ಪ್ರದರ್ಶಿಸಬೇಕು. ಪರವಾನಿಗೆದಾರರು ಕಡ್ಡಾಯವಾಗಿ ಮಳಿಗೆಗಳಲ್ಲಿ ಹಾಜರಿರಬೇಕು.ದೀಪಾವಳಿಯ ಮತ್ತು ತುಳಸಿ ಪೂಜೆಯ ಸಂದರ್ಭದಲ್ಲಿ ಪಟಾಕಿ ಮಾರಾಟ ಮಾಡುವ ಪರವಾನಗಿಯು ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ ಮತ್ತು ಸಾರ್ವಜನಿಕರ ಸುರಕ್ಷತೆಯ ಹಿತದೃಷ್ಟಿಯಿಂದ ಯಾವುದೇ ಸಮಯದಲ್ಲೂ ರದ್ದುಗೊಳಿಸುವ ಷರತ್ತಿಗೆ ಒಳಪಟ್ಟಿರುತ್ತದೆ ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತ ಅನುಪಮ್ ಅಗ್ರವಾಲ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.