ಮಲ್ಪೆ: ಮೀನು ಮಾರಾಟದ ಹಣವನ್ನು ಕಂಪೆನಿಗೆ ನೀಡದೆ ಸ್ವಂತಕ್ಕೆ ಬಳಸಿ ಲಕ್ಷಾಂತರ ರೂ. ವಂಚಿಸಿರುವ ಬಗ್ಗೆ ನ್ಯಾಯಾಲಯದ ಖಾಸಗಿ ದೂರಿನಂತೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಹಾರಾಷ್ಟ್ರ, ದಕ್ಷಿಣ ಭಾರತ ಕಡೆಗಳಿಗೆ ಹೋಲ್ ಸೇಲ್ ಮೀನು ಮಾರಾಟ ವ್ಯವಹಾರ ನಡೆಸುತ್ತಿದ್ದ ಅಬ್ದುಲ್ ರೆಹಮಾನ್ ಎಂಬವರ ಶರ್ಫುನ್ನೀಸ ಫಿಶ್ ಅಸೋಸಿಯೇಟ್ಸ್‌ನಲ್ಲಿ ಪ್ರಶಾಂತ ಎಂಬಾತ ಕೆಲವು ವರ್ಷಗಳಿಂದ ಮಾರ್ಕಿಟಿಂಗ್ ವ್ಯವಹಾರವನ್ನು ನಡೆಸುತ್ತಿದ್ದನು. ಈತ ಕಮಿಷನ್ ಆಧಾರದಲ್ಲಿ ಮೀನು ವ್ಯವಹಾರ ನಡೆಸಿದ ಗ್ರಾಹಕರಿಂದ ಹಣವನ್ನು ಸಂಗ್ರಹಿಸಿ ಸಂಸ್ಥೆಗೆ ನೀಡುತ್ತಿರುವ ಕೆಲಸ ಮಾಡಿಕೊಂಡಿದ್ದನು.
ಇತ್ತೀಚಿಗೆ ಪರಿಶೀಲಿಸಿದಾಗ ವ್ಯವಹಾರದಿಂದ ಬರಬೇಕಾದ ಹಣವು ಸರಿಯಾಗಿ ಸಂಸ್ಥೆಯ ಖಾತೆಗೆ ಜಮಾ ಆಗದೇ ಇರುವುದು ಕಂಡುಬಂದಿದ್ದು, ಈ ಬಗ್ಗೆ ಮೀನು ಖರೀದಿಸಿದ ಗ್ರಾಹಕರನ್ನು ವಿಚಾರಿಸಿದಾಗ ಮೀನು ವ್ಯವಹಾರದ ಹಣವನ್ನು ಪ್ರಶಾಂತ ಅವರಿಗೆ ನೀಡಿರುವುದಾಗಿ ತಿಳಿಸಿದ್ದರು. ಈ ಬಗ್ಗೆ ಪರಿಶೀಲಿಸಿದಾಗ ಒಟ್ಟು 90,00,000ರೂ. ಹಣವು ಸಂಸ್ಥೆಗೆ ಜಮಾ ಆಗದೇ ಇರುವುದು ತಿಳಿದು ಬಂದಿದೆ. ಪ್ರಶಾಂತ್ ಆ ಹಣವನ್ನು ಸಂಸ್ಥೆಗೆ ಜಮಾ ಮಾಡದೇ ಸ್ವಂತಕ್ಕೆ ಬಳಸಿ ವಂಚನೆ ಎಸಗಿರುವುದಾಗಿ ದೂರಲಾಗಿದೆ.