ಉಡುಪಿ: ಉಡುಪಿ ತಾಲ್ಲೂಕಿನ ಕೆಮ್ಮಣ್ಣು ನೇಜಾರಿನಲ್ಲಿ ಒಂದೇ ಕುಟುಂಬದ ನಾಲ್ವರನ್ನು ಹತ್ಯೆಗೈದ ಪ್ರಕರಣ ನಡೆದಿದ್ದು ತನಿಖೆ ಮುಂದುವರಿದಿದ್ದು, ಪೊಲೀಸರಿಗೆ ಮಹತ್ವದ ಸುಳಿವು ಲಭಿಸಿದೆ ಎಂದು ತಿಳಿದು ಬಂದಿದೆ.
ಉಡುಪಿಯ ಸಂತೆ ಕಟ್ಟೆಯಿಂದ ಆಟೋದಲ್ಲಿ ಬಂದ ಬೋಳು ತಲೆಯ , ಮಾಸ್ಕ್ ಧರಿಸಿದ್ದ ದುಷ್ಕರ್ಮಿ, ಉಡುಪಿ ಜಿಲ್ಲೆಯ ಮಲ್ಪೆ ಠಾಣಾ ವ್ಯಾಪ್ತಿಯ ನೇಜಾರು ಸಮೀಪದ ತೃಪ್ತಿ ಲೇ ಔಟ್ ವೊಂದರಲ್ಲಿದ್ದ ನಾಲ್ವರ ಹತ್ಯೆಗೈದಿದ್ದ. ತಾಯಿ ಮತ್ತು ಮೂವರು ಮಕ್ಕಳು ಹತ್ಯೆಯಾದವರು. ಇನ್ನೂ ನೂರ್ ಮೊಹಮ್ಮದ್ ಅವರ ತಾಯಿ ಹಾಜಿರಾಬಿ(70) ಅವರು ಗಂಭೀರ ಗಾಯಗೊಂಡು ಅರೆ ಪ್ರಜ್ಙಾವಸ್ಥೆಯಲ್ಲಿದ್ದು ಆಸ್ಫತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಭಾನುವಾರ (ನ.12) ಬೆಳಗಿನ ಸಮಯ ಈ ಬರ್ಬರ ಹತ್ಯೆ ನಡದಿದ್ದು, ತಾಯಿ ಹಸೀನಾ (46) ಹಾಗೂ ಮಕ್ಕಳಾದ ಅಫ್ನಾನ್ (23), ಅಯ್ನಾಝ್ (21), ಆಸಿಂ (12) ಮೃತ ದುರ್ದೈವಿಗಳು. ಹಸೀನಾ ಗೃಹಿಣಿಯಾಗಿದ್ದು ಈಕೆಯ ಪತಿ ನೂರ್ ಮಹಮ್ಮದ್ ಸೌದಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಈ ದಂಪತಿಗೆ ಮೂವರು ಮಕ್ಕಳಿದ್ದು, ಹಿರಿಯ ಪುತ್ರಿ ಅಫ್ನಾನ್ ಉದ್ಯೋಗದ ಜತೆ ಲಾಜಿಸ್ಟಿಕ್ಸ್ ಸಂಸ್ಥೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದರೆ, ಆಸಿಂ ಉಡುಪಿಯಲ್ಲಿ 8ನೇ ತರಗತಿ ಓದುತ್ತಿದ್ದ. ಇನ್ನೂ ಏರ್ ಇಂಡಿಯಾದಲ್ಲಿ ಆಯ್ನಾಸ್ ಕೆಲಸ ಮಾಡುತ್ತಿದ್ದಳು. ಬೆಂಗಳೂರಿನಲ್ಲಿ ಏರ್ ಇಂಡಿಯಾ ಕಂಪೆನಿಯಲ್ಲಿ ಏರ್ ಹೋಸ್ಟೆಸ್ ಆಗಿ ಕೆಲಸ ಮಾಡುತ್ತಿದ್ದ ಆಯ್ನಾಸ್ ರಜೆಯ ಹಿನ್ನಲೆ ಉಡುಪಿಗೆ ಬಂದಿದ್ದರು.
ಏನಿದು ಪ್ರಕರಣ ?
ಕನ್ನಡದಲ್ಲಿ ಮಾತನಾಡುತ್ತಿದ್ದ ಆರೋಪಿ, ಸುಮಾರು 15 ರಿಂದ 20 ನಿಮಿಷಗಳ ಒಳಗೆ ನಾಲ್ವರನ್ನು ಕೊಲೆ ಮಾಡಿ ಪರಾರಿಯಾಗಿದ್ದ ಎನ್ನುವ ಬಲವಾದ ತನಿಖೆಯ ಪ್ರಾಥಮಿಕ ಹಂತದಲ್ಲಿ ವ್ಯಕ್ತವಾಗಿದೆ. ಉಡುಪಿಯ ಸಂತೆ ಕಟ್ಟೆಯಿಂದ ಆಟೋ ಒಂದರಲ್ಲಿ ಘಟನಾ ಸ್ಥಳಕ್ಕೆ ಬಂದಿದ್ದ ಆರೋಪಿ, ಮತ್ತೆ 20 ನಿಮಿಷಗಳ ಒಳಗೆ ಸಂತೆ ಕಟ್ಟೆಯ ಅದೇ ರಿಕ್ಷಾ ನಿಲ್ದಾಣಕ್ಕೆ ಆಗಮಿಸಿದ್ದ. ಆಟೋ ಚಾಲಕನಿಗೆ ಕರಾವಳಿ ಜಂಕ್ಷನ್‌ಗೆ ಬಿಡುವಂತೆ ಹೇಳಿದ್ದ ಎನ್ನಲಾಗಿದೆ. ಆತನ ಚಲನವಲನ ಗಮನಿಸಿದರೆ ಆತ ಕೊಂಚ ಗಾಬರಿಗೊಂಡಿರುವಂತೆ ಕಾಣುತ್ತಿತ್ತು ಎಂಬ ಮಾಹಿತಿಯೂ ಸಿಕ್ಕಿದೆ.
ಆಟೋ ರಿಕ್ಷಾ ಚಾಲಕ ಶ್ಯಾಮ್ ನೇಜಾರು ಅವರು ನಿಂತಿದ್ದ ಆಟೋ ನಿಲ್ದಾಣಕ್ಕೆ ಬಂದಿದ್ದ ಆರೋಪಿ, ತೃಪ್ತಿ ಲೇಔಟ್ ಗೊತ್ತೇ ಎಂದು ವಿಚಾರಿಸಿದ್ದ. ಆಗ ಉಳಿದ ಆಟೋ ಚಾಲಕರಲ್ಲಿ ವಿಚಾರಿಸಿ ಹಂಪನ ಕಟ್ಟೆ ಬಳಿ ಎಂದು ಮಾಹಿತಿ ಪಡೆದ ಆಟೋ ಚಾಲಕ, ಆರೋಪಿಯನ್ನು ಕರೆದುಕೊಂಡು ಬಂದಿದ್ದ. ರಿಕ್ಷಾದಲ್ಲಿ ಕುಳಿತಿದ್ದ ಆರೋಪಿ, ತೃಪ್ತಿ ಲೇಔಟ್ ಬಳಿ ಆಟೋ ಬಂದ ಕೂಡಲೇ ಇದೇ ಜಾಗವೆಂದು ಹೇಳಿ ರಿಕ್ಷಾ ತಿರುಗಿಸುವಂತೆ ಸೂಚಿಸಿದ್ದ ಎನ್ನಲಾಗಿದೆ.
ಮನೆಯ ಗೇಟ್ ಮುಂಭಾಗ ಆಟೋ ನಿಲ್ಲಿಸಿದ ಚಾಲಕ, ಅಲ್ಲಿಂದ ವಾಪಸ್ ಬಂದಿದ್ದ. ಆರೋಪಿ ಮನೆ ಒಳಗೆ ಪ್ರವೇಶಿಸಿದ್ದ. ಈ ವೇಳೆ ನನಗೆ ಆರೋಪಿ ಬಗ್ಗೆ ಯಾವುದೇ ಅನುಮಾನ ಬಂದಿರಲಿಲ್ಲ ಎಂದು ಆಟೋ ಚಾಲಕ ಹೇಳಿದ್ದಾನೆ. ಇನ್ನು ಮನೆಯ ಬಾಗಿಲ ಬಳಿ ಬಾಲಕನೋರ್ವ ನಿಂತುಕೊಂಡಿದ್ದ. ಆರೋಪಿಯು ಬೆನ್ನಿಗೆ ಹಾಕುವ ಬ್ಯಾಗ್ ಒಂದು ಹಾಕಿಕೊಂಡಿದ್ದ ಎಂದೂ ಆಟೋ ಚಾಲಕ ಮಾಹಿತಿ ನೀಡಿದ್ದಾನೆ.
ಬೆಳಗ್ಗೆ 8.30ರ ಸುಮಾರಿಗೆ ಆರೋಪಿಯನ್ನು ಸಂತೆ ಕಟ್ಟೆಯಿಂದ ಕೃತ್ಯ ನಡೆದ ಮನೆ ಬಳಿ ಆಟೋ ಚಾಲಕ ಬಿಟ್ಟಿದ್ದರು. ಇದಾದ ಕೇವಲ 20 ನಿಮಿಷದೊಳಗೆ ಮತ್ತೆ ಅದೇ ರಿಕ್ಷಾ ನಿಲ್ದಾಣಕ್ಕೆ ಆರೋಪಿ ಬಂದಿದ್ದ. ಬೈಕ್‌ನಲ್ಲಿ ಬಂದಿಳಿದ ಆರೋಪಿ ಗಾಬರಿಯಲ್ಲಿದ್ದ. ತನ್ನನ್ನು ಕರಾವಳಿ ಬೈಪಾಸ್‌ಗೆ ಬಿಡುವಂತೆ ಮೊದಲು ಅವರನ್ನು ಕರಕೊಂಡು ಹೋಗಿದ್ದ ಶ್ಯಾಮ್ ಅವರಲ್ಲಿಯೇ ಕೇಳಿಕೊಂಡಿದ್ದ. ಆಗ ಆಟೋ ಚಾಲಕ ಶ್ಯಾಮ್ ಅವರು, ಈಗ ತಾನೇ ನಾನು ನಿಮ್ಮನ್ನು ಮನೆಯ ಬಳಿ ಬಿಟ್ಟಿದೆ. ಅಲ್ಲಿಯೇ ನಿಲ್ಲುವಂತೆ ನೀವು ಹೇಳಿದ್ದರೆ, ನಾನು ಅಲ್ಲಿಯೇ ನಿಲ್ಲುತ್ತಿದ್ದೆ ಎಂದು ಹೇಳಿದರು. ಆಗ ಆರೋಪಿಯು ಪರವಾಗಿಲ್ಲ ಎಂದು ತಿಳಿಸಿದ್ದ.ಸ್ಟ್ಯಾಂಡ್ ನಲ್ಲಿ ಆಟೋಗಳು ಕ್ಯೂ ಪ್ರಕಾರ ಹೋಗುವುದರಿಂದ , ಮೊದಲಿನ ರಿಕ್ಷಾಕ್ಕೆ ಹೋಗುವಂತೆ ಆತನಿಗೆ ತಿಳಿಸಿದ್ದು ಅದರಂತೆ ಆತ ಕ್ಯೂ ನಲ್ಲಿದ್ದ ಮೊದಲ ರಿಕ್ಷಾ ಹತ್ತಿದ್ದ. ಆ ರಿಕ್ಷಾದವರ ಬಳಿ ನನಗೆ ತುರ್ತು ಇದೆ, ಬೇಗ ಕರಾವಳಿ ಬೈಪಾಸ್‌ಗೆ ಬಿಡಿ ಎಂದಿಷ್ಟೇ ಆಟೋ ಚಾಲಕರಿಗೆ ಕೇಳಿಕೊಂಡ ಎಂಬ ಮಾಹಿತಿ ಪೊಲೀಸರಿಗೆ ಲಭ್ಯವಾಗಿದೆ.
ಕೃತ್ಯ ಹೇಗೆ ನಡೆದಿರಬಹುದು ?
ರವಿವಾರ ಬೆಳಿಗ್ಗೆ 8.45ರ ಸುಮಾರಿಗೆ ತೃಪ್ತಿ ಲೇ ಔಟ್ ನಲ್ಲಿರುವ ಆ ಮನೆಗಯ ಒಳ ಹೊಕ್ಕ ಆರೋಪಿ ಮೊದಲು ಅಡುಗೆ ಕೋಣೆಯಲ್ಲಿದ್ದ ಹಸಿನಾ ಅವರಿಗೆ ಚಾಕುವಿನಿಂದ ಇರಿದಿದ್ದಾನೆ. ಬಳಿಕ ಅಡುಗೆಯ ಕೋಣೆಯ ಸಮೀಪ ಶೌಚಾಲಯದ ಬಳಿ ಅಪ್ನಾನ್ ಹಾಗೂ ಬೆಡ್ ರೂಂ ನಲ್ಲಿದ್ದ ಇನ್ನೊರ್ವ ಮಗಳು ಆಯ್ನಾಝ್ ಅವರಿಗೆ ಅನೇಕ ಬಾರಿ ಇರಿದಿದ್ದಾನೆ. ತಡೆಯಲು ಬಂದ ನೂರ್ ಅವರ ತಾಯಿಯ ಸೊಂಟಕ್ಕೆ ಇರಿಯಲಾಗಿದೆ. ಗಂಭೀರ ಗಾಯಗೊಂಡ ಅವರು ಶೌಚಲಾಯದಲ್ಲಿ ಅಡಗಿ ಜೀವ ಉಳಿಸಿಕೊಂಡಿದ್ದಾರೆ
ಮನೆಯೊಳಗಿನ ಬೊಬ್ಬೆ ಕೇಳಿ ಅಂಗಳದಲ್ಲಿ ಸೈಕಲ್ ನಲ್ಲಿ ಆಡುತ್ತಿದ್ದ ಹುಡುಗ ಆಸೀಂ ಮನೆಯೊಳಗೆ ಬಂದಿದ್ದು ಹಾಲ್ ನಲ್ಲಿ ಎದುರುಗೊಂಡ ದುಷ್ಕರ್ಮಿ ಬಾಲಕನನ್ನು ಇರಿದು ಕೊಂದಿದ್ದಾನೆ. ಆ ಮನೆಯಲ್ಲಿ ಮಾರಣಹೋಮ ನಡೆಯುತ್ತಿದ್ದಾಗ ಬೊಬ್ಬೆ ಕೇಳಿ ಬಂದಿದ್ದು, ಪಕ್ಕದ ಮನೆಯ ಯುವತಿ ಹೊರಗೊಡಿ ಬಂದಿದ್ದಾರೆ. ಈ ವೇಳೆ ಮನೆಯಂಗಳಕ್ಕೆ ಬಂದಿದ್ದ ಹಂತಕ ಆಕೆಗೂ ಚೂರಿ ತೋರಿಸಿ ಬೆದರಿಸಿದ್ದಾನೆ.
ಅನುಮಾನಗಳುಸದ್ಯ ಪೊಲೀಸರು ಕಲೆ ಹಾಕಿರುವ ಮಾಹಿತಿ ಪ್ರಕಾರ ಹಂತಕ ಬೆಂಗಳೂರು ಮೂಲದವ ಎಂದು ತಿಳಿದು ಬಂದಿದೆ. ಈ ಮನೆಯ ಒಬ್ಬ ಸದಸ್ಯನಿಗೆ ಹಾಗೂ ಹಂತಕನಿಗೆ ಯಾವುದೋ ವಿಷಯದಲ್ಲಿ ಮನಸ್ತಾಪ ಉಂಟಾಗಿದ್ದು, ಆ ದ್ವೇಷದಿಂದ ಆತ ಕೃತ್ಯ ಎಸಗಿರಬಹುದು ಎಂಬ ಶಂಕೆ ವ್ಯಾಪಕವಾಗಿ ಕೇಳಿ ಬರುತ್ತಿದೆ. ಮನೆಯಲ್ಲಿ ಯಾವುದೇ ವಸ್ತುಗಳು ಕಾಣೆಯಾಗದಿರುವುದರಿಂದ ಹಾಗೂ ಮನೆಯೊಳಗಡೆ ತಡಕಾಡಿದ ಕುರುಹುಗಳು ಕಂಡು ಬಾರದಿರುವುದರಿಂದ ಇದು ಹಣಕ್ಕೆ ಅಥಾವ ದಾಖಲೆ ಇತ್ಯಾದಿಗಳಿಗಾಗಿ ನಡೆದ ಹತ್ಯೆಯಲ್ಲ ಎನ್ನುವುದು ಮೇಲ್ನೋಟಕ್ಕೆ ಕಂಡು ಬಂದಿದೆ.
ಭಾನುವಾರ ದುಬೈಗೆಬೆಂಗಳೂರಿನಲ್ಲಿ ಉದ್ಯೋಗದಲ್ಲಿದ್ದ ಆಯ್ನಾಸ್ ರವಿವಾರ ಮಧ್ಯಾಹ್ನ 12 ಗಂಟಗೆ ಬಜಪೆ ವಿಮಾನ ನಿಲ್ದಾಣದ ಮೂಲಕ ದುಬೈಗೆ ಹೋಗುವ ವಿಮಾನದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು
ಬಟ್ಟೆ ಬದಲಿಸಿದ :
ಸಂತೆ ಕಟ್ಟೆಯಿಂದ ಬಿಳಿ ಬಣ್ಣದ ಬಟ್ಟೆ ಧರಿಸಿ ತೃಪ್ತಿ ಲೇ ಔಟ್ ಗೆ ತೆರಳಿದ್ದ ಹಂತಕ, ವಾಪಸ್ಸು ಆಟೋ ಸ್ಟ್ಯಾಂಡ್ ಗೆ ಬರುವಾಗ ತಿಳಿ ಗುಲಾಬಿ ಬಣ್ಣದ ಅಂಗಿ ಧರಿಸಿದ್ದ.
ಆಯುಧ, ಶರ್ಟ್ ಪತ್ತೆಯಾಗಿಲ್ಲ
ಕೃತಕ್ಕೆ ಬಳಿಸಿದ ಚೂರಿ ಅಥಾವ ಇನ್ನಾವುದೇ ಆಯುಧ ಇಷ್ಟರವರೆಗೆ ಪತ್ತೆಯಾಗಿಲ್ಲ . ಈ ಹಿನ್ನಲೆಯಲ್ಲಿ ಕೃತ್ಯ ನಡೆದ ಮನೆಗೆ ಸಾರ್ವಜನಿಕರಿಗೆ ನಿರ್ಬಂದ ಹೇರಲಾಗಿತ್ತು. ಮೆಟಲ್ ಡಿಟೆಕ್ಟರ್ ಮೂಲಕ ಮನೆ ಹಾಗು ಅದರ ಸುತ್ತಮುತ್ತಾ ಆಯುಧಕ್ಕಾಗಿ ಪೊಲೀಸರು ಶೋಧ ನಡೆಸಿದ್ದರೂ ಪತ್ತೆಯಾಗಿಲ್ಲ . ಕೃತ್ಯಕ್ಕೆ ಬಳಸಿದ ಆಯುಧ ಹಾಗೂ ಕೃತ್ಯದ ವೇಳೆ ಬಳಿಸಿದ ಡ್ರೆಸ್ ಅನ್ನು ಬ್ಯಾಗ್ ನಲ್ಲಿ ತುಂಬಿಸಿಕೊಟ್ಟು ಆರೋಪಿ ತನ್ನ ಜತೆಯೇ ತೆಗೆದುಕೊಂಡು ಹೋಗಿರಬಹುದು ಎಂದು ಶಂಕಿಸಲಾಗಿದೆ
ಇನ್ನೂ ಹಂತಕ ಕೃತ್ಯ ಎಸಗಿದ ಬಳಿಕ ಸಂತಕಟ್ಟೆ ಆಟೋ ಸ್ಟ್ಯಾಂಡ್ ವರೆಗೆ ಯಾವ ವಾಹನದಲ್ಲಿ ಬಂದ ಹಾಗೂ ಕರಾವಳಿ ಜಂಕ್ಷನ್ ಬಳಿಯಿಂದ ಯಾವ ಕಡೆ ಹೋದ ಎಂಬ ಬಗ್ಗೆ ಪೊಲೀಸರು ಮಾಹಿತಿ ಕಲೆ ಹಾಕುತ್ತಿದ್ದಾರೆ.