ಮಂಗಳೂರು: ಅಧಿಕ ಬಡ್ಡಿದರ ನೀಡುವುದಾಗಿ ಹೇಳಿ ವಂಚಿಸಿದ ಆರೋಪದ ಮೇರೆಗೆ ಮಂಗಳೂರಿನ ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ವಿನೋದ ಶೆರ್ಲೆಕರ್ ಎಂಬಾತ ಎಂಜಿ ರಸ್ತೆಯ ಎಸ್ಸೆಲ್ ಸೆಂಟರ್‌ನ 3ನೇ ಮಹಡಿಯಲ್ಲಿರುವ ಫ್ರಂಟ್ ಲೈನ್ ಮಲ್ಟಿಪರ್ಪಸ್ ಕೋ- ಆಪರೇಟಿವ್ ಸೊಸೈಟಿಯಲ್ಲಿ ಹಣವನ್ನು ನಿಶ್ಚಿತ ಠೇವಣಿ (ಡೆಪಾಸಿಟ್) ಮಾಡಿದರೆ ವಾರ್ಷಿಕ ಶೇ.11.50 ಬಡ್ಡಿದರ ನೀಡುವುದಾಗಿ ಹೇಳಿದ್ದ. ಅದರಂತೆ ತಾನು 2018ರ ಡಿಸೆಂಬರ್ 31ರಂದು 3 ಲಕ್ಷ ರೂ ಗಳನ್ನು ಎಫ್‌ಡಿ ಹಾಗೂ 5 ಲಕ್ಷ ರೂ ಗಳನ್ನು ನಿಶ್ಚಿತ ಠೇವಣಿ ಮಾಡಿದ್ದೆ. ಕೆಲವು ವರ್ಷಗಳ ಬಳಿಕ ಹಣವು ಮೆಚ್ಯುರಿಟಿಗೆ ಬಂದಾಗ ಸೊಸೈಟಿಗೆ ತೆರಳಿ ಹಣ ಕೇಳಿದೆ. ಶೀಘ್ರ ಕೊಡುವುದಾಗಿ ಹೇಳಿ ಕಳುಹಿಸಿದ್ದ. ಬಳಿಕ 2023ರ ಫೆಬ್ರವರಿಯಲ್ಲಿ ಹಣವನ್ನು ಕೊಡುವಂತೆ ಕೇಳಿದಾಗ 3 ಖಾಲಿ ಚೆಕ್‌ಗಳನ್ನು ನೀಡಿದ್ದ. ಅವುಗಳನ್ನು ಬ್ಯಾಂಕ್ ಗೆ ಹಾಕದಂತೆ ಸೂಚಿಸಿದ್ದ. ಆದರೆ ನಂತರವೂ ಹಣವನ್ನು ನೀಡದೆ ಮೋಸ ಮಾಡಿದ್ದಾನೆ ಎಂದು ವಂಚನೆಗೊಳಗಾದ ವ್ಯಕ್ತಿ ದೂರಿನಲ್ಲಿ ತಿಳಿಸಿದ್ದಾರೆ.