ಉಪ್ಪಿನಂಗಡಿ: ಸೈಬರ್ ಕ್ರೈಮ್ ನಡಿ ಹಲವು ವಂಚನಾ ಜಾಲ ಕಾರ್ಯಾಚರಿಸುತ್ತಿದೆ. ಈಗ ‘ಮೀಶೋ’ ಹೆಸರಲ್ಲಿ ವಂಚನಾ ಜಾಲವೊಂದು ಇದೇ ಗುಂಪಿಗೆ ಸೇರಿಕೊಂಡಿದೆ.
ಈ ಜಾಲವು ಈಗ ಉಪ್ಪಿನಂಗಡಿ ಸಮೀಪದ 34 ನೆಕ್ಕಿಲಾಡಿ ನಿವಾಸಿ, ಉದ್ಯಮಿ ಜಿ.ಎಂ. ಮುಸ್ತಾಫ ಅವರಿಗೂ ಜಾಲ ಬೀಸಿದೆ. ಆದರೆ ಅವರು ಜಾಗೃತರಾಗಿದ್ದರಿಂದಾಗಿ ಅಪಾಯದಿಂದ ತಪ್ಪಿಸಿಕೊಂಡರು. ಈ ಬಗ್ಗೆ ವಿವರಿಸಿರುವ ಮುಸ್ತಾಫ, ಎಲ್ಲರೂ ಇಂತಹ ವಂಚನಾ ಜಾಲಗಳ ಬಗ್ಗೆ ಜಾಗೃತರಾಗುವಂತೆ ಎಚ್ಚರಿಸಿದ್ದಾರೆ. ನನ್ನ ಪತ್ನಿಯ ಹೆಸರಿನಲ್ಲಿ ರಿಜಿಸ್ಟರ್ಡ್ ಪೋಸ್ಟ್ ವೊಂದು ಮನೆಗೆ ಬಂದಿತು. ಅದನ್ನು ತೆರೆದು ನೋಡಿದಾಗ’ಮೀಶೋ’ಸಂಸ್ಥೆಎಂಬ ಉಲ್ಲೇಖವಿತ್ತು. ಸಂಸ್ಥೆಯ 8ನೇ ವರ್ಷದ ಸಂಭ್ರಮಾಚರಣೆಯ ಪ್ರಯುಕ್ತ ಕಂಪೆನಿಯು ನೋಂದಾಯಿತ ಗ್ರಾಹಕರಿಗೆ ಲಕ್ಕಿ ಡ್ರಾ ಸ್ಪರ್ಧೆಯನ್ನು ಆಯೋಜಿಸಿದ್ದು, ಅತ್ಯಾಕರ್ಷಕ 20 ಬಹುಮಾನಗಳಿವೆ. ಅವುಗಳಲ್ಲಿ ಮೂರು ದೊಡ್ಡ ಬಹುಮಾನಗಳಾಗಿದ್ದು, ಉಳಿದವು ಸಣ್ಣ ಬಹುಮಾನಗಳು. ನಿಮಗೆ ಕಳುಹಿಸಿದ ಕಾರ್ಡ್ ಅನ್ನು ಸ್ಕಾಚ್ ಮಾಡಿ ನೋಡಿ. ನೀವು ಬಹುಮಾನ ಗೆದ್ದರೆ ಪರಿಶೀಲನೆ ಪ್ರಕ್ರಿಯೆಗಾಗಿ ನೀವು ಕೆಲವು ದಾಖಲೆಗಳನ್ನು ಅದರಲ್ಲಿ ಕೊಟ್ಟಿರುವ ನಂಬರ್ಗೆಗೆ ಕಳುಹಿಸಬೇಕು ಎಂದು ಹೇಳಲಾಗಿತ್ತು.
ಅವುಗಳಲ್ಲಿ ಸರಕಾರದಿಂದ ನೀಡಲಾದ ಗುರುತಿನ ಚೀಟಿ (ಐಡಿ)ಯನ್ನು ಕೇಳಲಾಗಿತ್ತು. ಕಾರ್ಡ್ ಸ್ಕಾಚ್ ಮಾಡಿದ ಬಳಿಕ ವಾಟ್ಸಪ್ ನಂಬರಿಗೆ ಈ ಕಾರ್ಡ್ ಅನ್ನು ಕಳುಹಿಸಿ ಎಂದೆಲ್ಲಾ ಅದರಲ್ಲಿ ಇತ್ತು. ಅದರಲ್ಲಿ ಮೊದಲ ಬಹುಮಾನ 14,51,000 ರೂ. ನಗದಾದರೆ, ಎರಡನೇ ಬಹುಮಾನ ಕಾರು ಹಾಗೂ ಮೂರನೇ ಬಹುಮಾನ ದ್ವಿಚಕ್ರ ವಾಹನವೆಂದಿತ್ತು. ಆ ಕಾರ್ಡ್ ಅನ್ನು ಸ್ವಾಚ್ ಮಾಡಿದಾಗ ಮೊದಲ ಬಹುಮಾನವಾದ 14,51,000 ರೂ. ನಗದು ಬಹುಮಾನದ ನಂಬರ್ ಎಂದು ಬರೆದಿತ್ತು. ಆಗಲೇ ಇದು ವಂಚನಾ ಜಾಲ ಎನಿಸಿದರೂ ಆ ಕಾರ್ಡ್ ಅನ್ನು ನಾವು ಅವರಿಗೆ ಕಳುಹಿಸಿದೆವು. ಆಗ 501 ರೂ. ಹಾಗೂ ಸರಕಾರದಿಂದ ನೀಡಲಾದ ಅಧಿಕೃತ ಗುರುತಿನ ಚೀಟಿ ಕಳುಹಿಸಿ ಎಂಬ ಉತ್ತರ ದೊರೆಯಿತು. ಇದು ಸಂಪೂರ್ಣ ಮೋಸದ ಜಾಲ. ಒಂದು ವೇಳೆ ಅವರು ಕೇಳಿದ ಹಣವನ್ನು ಅವರ ಅಕೌಂಟ್ ಗೆ ಹಾಗೂ ಐಡಿ ಕಾರ್ಡ್ ಅನ್ನು ಕಳುಹಿಸಿದ್ದರೆ, ಆ ಅಕೌಂಟ್ನಲ್ಲಿದ್ದ ಹಣವೆಲ್ಲಾ ವಂಚಕರ ಪಾಲಾಗುತ್ತಿತ್ತು. ಮಹಿಳೆಯರನ್ನೇ ಇಂತಹ ವಂಚಕರು ಹೆಚ್ಚಾಗಿ ಗುರಿಯಾಗಿಸುತ್ತಿದ್ದಾರೆ.