ಮಂಗಳೂರು: ಕೆನಡಾದ ವೀಸಾ ಕೊಡಿಸುವುದಾಗಿ ನಂಬಿಸಿ 15 ಲಕ್ಷ ರೂ. ವಂಚಿಸಿರುವ ಬಗ್ಗೆ ಕಾವೂರು ಠಾಣೆಯಲ್ಲಿ ದೂರು ದಾಖಲಾಗಿದೆ. ಕುವೈತ್ ನಲ್ಲಿ ಸೇಲ್ಸ್ ಎಕ್ಸಿಕ್ಯೂಟಿವ್ ಆಗಿರುವ ಡೊಮಿನಿಕ್ ಕಿಶೋರ್ ಡಿ’ಸೋಜಾ ಅವರಿಗೆ ಕೆನಡಾದ ವಿಸಾ ಕೊಡಿಸುವುದಾಗಿ ಅವರ ಸ್ನೇಹಿತ ರೋಶನ್ ನವೀನ್ ಕ್ರಾಸ್ಟೋ ಗೆ ಅವರಿಗೆ ಪರಿಚಯವಿರುವ ಜೇಮ್ಸ್ ಡಿ’ಸೋಜ ಹೇಳಿದ್ದರು. ಅದರಂತೆ ಡೊಮಿನಿಕ್ ಅವರಿಗೆ ಜೇಮ್ಸ್ ಡಿಸೋಜನನ್ನು ಪರಿಚಯಿಸಲಾಗಿತ್ತು. 30 ಲಕ್ಷ ರೂ. ಹಣ ನೀಡಿದರೆ ಡೊಮಿನಿಕ್ ಹಾಗೂ ಅವರ ಹೆಂಡತಿಗೆ ವೀಸಾ ಮಾಡಿಕೊಡುವುದಾಗಿ ಜೇಮ್ಸ್ ತಿಳಿಸಿದ್ದನು. ಅದರಲ್ಲಿ 15 ಲಕ್ಷ ರೂ. ಹಣವನ್ನು ವೀಸಾ ಮಾಡುವ ಮೊದಲು ಹಾಗೂ ಉಳಿದ 15 ಲಕ್ಷ ರೂ. ಹಣವನ್ನು ಕೆನಡಾ ದೇಶಕ್ಕೆ ಹೊದ ಬಳಿಕ ನೀಡಬೇಕೆಂದು ತಿಳಿಸಿದ್ದನು. ಅದರಂತೆ ಸುಮಾರು 9 ಕಂತುಗಳಲ್ಲಿ 15 ಲಕ್ಷ ರೂ. ಪಾವತಿಸಲಾಗಿತ್ತು. ಅದರಲ್ಲಿ 5 ಲಕ್ಷ ರೂ. ಹಣವನ್ನು ಅವರ ಸಂಬಂಧಿ ಅರುಣ್ ಡೆರಿಕ್ ಮೊಂತೇರೊರವರ ಬ್ಯಾಂಕ್ ಖಾತೆ ಮೂಲಕ ಜೇಮ್ಸ್ ತಿಳಿಸಿದ ಖಾತೆಗೆ ಜಮೆ ಮಾಡಲಾಗಿತ್ತು. ವೀಸಾ ಪಡೆಯುವ ಹಿನ್ನೆಲೆಯಲ್ಲಿ ಮೇ 26ರಂದು ಐ.ಇ.ಎಲ್.ಟಿ.ಎಸ್. ಪರೀಕ್ಷೆ ಇರುವುದಾಗಿ ತಿಳಿಸಲಾಗಿತ್ತು. ಇದಕ್ಕೆ ಸಂಬಂಧಿಸಿದಂತೆ ಜೇಮ್ಸ್‌ಗೆ ಕರೆ ಮಾಡಿದಾಗ ಮೊಬೈಲ್ ಸ್ವಿಚ್ ಆಫ್ ಆಗಿದೆ. ಹಲವು ಬಾರಿ ಪ್ರಯತ್ನಿಸಿದರೂ ಮೊಬೈಲ್ ಸ್ವಿಚ್ ಆಫ್ ಆಗಿದ್ದು, ಹಣ ವಾಪಸು ಮಾಡದೆ ಮೋಸ ಮಾಡಿದ್ದಾನೆ. ಇದೇ ರೀತಿ ಹಲವು ಮಂದಿಗೆ ಮೋಸ ಮಾಡಿರುವ ಮಾಹಿತಿ ಇದೆ. ಆತನ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ದೂರಿನಲ್ಲಿ ತಿಳಿಸಿದ್ದಾರೆ. ಈ ಬಗ್ಗೆ ಕಾವೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.