ಮಂಗಳೂರು: ಪಾರ್ಟ್‌ಟೈಮ್ ಜಾಬ್ ಆಫರ್ ನೀಡಿ ವ್ಯಕ್ತಿಯೊಬ್ಬರಿಂದ ಹಂತಹಂತವಾಗಿ 28,18,065 ರೂ ವಂಚನೆಗೈದ ಐವರು ಆರೋಪಿಗಳನ್ನು ಕೊಣಾಜೆ ಪೊಲೀಸರು ಬಂಧಿಸಿದ್ದಾರೆ. ಫಿರ್ಯಾದಿದಾರರ ವಾಟ್ಸ್ಆ್ಯಪ್‌ಗೆ ಜುಲೈ 21ರಂದು ಪಾರ್ಟ್‌ಟೈಮ್ ಜಾಬ್ ಆಫರ್ ಬಂದಿತ್ತು. ಅದರಲ್ಲಿ ಬಂದ ವೀಡಿಯೋದ ಸ್ಕ್ರೀನ್ ಶಾಟ್ ತೆಗೆದು ಹಾಕುವಂತೆ ಸೂಚಿಸಿದ್ದಂತೆ ಅವರು ಕಳುಹಿಸಿದ್ದರು. ಆ ತಕ್ಷಣ ಅವರ ಬ್ಯಾಂಕ್ ಖಾತೆಗೆ 130 ರೂ ಕ್ರೆಡಿಟ್ ಆಗಿದೆ. ಬಳಿಕ ಹಾಕಿರುವ ವೀಡಿಯೋ ತಪ್ಪಾಗಿದೆ ಎಂದು ಸೂಚನೆ ನೀಡಿದ ಪಾರ್ಟ್‌ಟೈಮ್ ಜಾಬ್ ಆಫರ್ ನೀಡಿದವರು ಟೆಲಿಗ್ರಾಂ ಲಿಂಕ್ ಅನ್ನು ಕಳುಹಿಸಿದ್ದಾರೆ. ಅದನ್ನು ಓಪನ್ ಮಾಡಿದಾಗ 1000 ರೂ ಹಾಕುವಂತೆ ಸೂಚಿಸಿದ್ದಾರೆ. ಬಳಿಕ ಹಂತಹಂತವಾಗಿ ಹಣ ಹಾಕಲು ಸೂಚಿಸುತ್ತಾ 28,18,065 ರೂ ಹಣವನ್ನು ತಮ್ಮ ಖಾತೆಗೆ ಹಾಕಲು ಹಾಕಿಸಿಕೊಂಡಿದ್ದಾರೆ. ತನಿಖೆ ಆರಂಭಿಸಿದ ಪೊಲೀಸರು ವರ್ಗಾವಣೆ ಆಗಿರುವ ಬ್ಯಾಂಕ್ ಖಾತೆ, ಇತರ ಹಣದ ಮಾಹಿತಿ ಆಧಾರದಲ್ಲಿ ಮೈಸೂರು ಉದಯಗಿರಿ ಮೂಲದ ನಾಲ್ವರು, ಬೆಂಗಳೂರು ನೀಲಸಂದ್ರದ ಓರ್ವ ಆರೋಪಿಯನ್ನು ಬಂಧಿಸಿದ್ದಾರೆ. ವಿಚಾರಣೆ ಮಾಡಿದಾಗ ಶೋಯೇಬ್ ಎಂಬಾತ ದಸ್ತಗಿರ್ ಎಂಬಾತನಲ್ಲಿ ಒಂದು ಬ್ಯಾಂಕ್ ಖಾತೆಗೆ 10ಸಾವಿರ ರೂ ನಂತೆ ಮೂರು ಬ್ಯಾಂಕ್ ಖಾತೆಗಳನ್ನು ಮಾಡಿಸಿದ್ದ. ಈ ನಡುವೆ ಶೋಯೆಬ್‌ಗೆ ಏರ್ಟೆಲ್ ಸಂಸ್ಥೆಯಲ್ಲಿ ಪ್ರಾಡಕ್ಟ್ ಟ್ರೈನರ್ ಆಗಿದ್ದ ಸೈಯ್ಯದ್ ಮಹಮೂದ್ ಪರಿಚಿತನಾಗಿದ್ದು, ಆತನಿಂದ ಸಿಮ್‌ಗಳನ್ನು ಖರೀದಿಸಿದ್ದಾನೆ. ಅಲ್ಲದೆ ಶೋಯೆಬ್ ಸೂಚಿಸಿರುವವರಿಗೂ ಆತ ಸಿಮ್‌ಗಳನ್ನು ನೀಡಿದ್ದ. ಅದಕ್ಕೆ 20ಸಾವಿರ ರೂ. ನೀಡಿದ್ದ. ಬಳಿಕ ಶೋಯೆಬ್ ಮೊಯ್ದೀನ್ ಅಹ್ಮದ್ ಖಾನ್ ಎಂಬಾತನಿಗೆ ಲೋನ್ ಕೊಡುವ ವಿಚಾರ ತಿಳಿಸಿ ಆತನಿಗೂ 10ಸಾವಿರ ರೂ.ನಂತೆ ಎರಡು ಬ್ಯಾಂಕ್ ಅಕೌಂಟ್ ಮಾಡಿಸಿದ್ದ. ಬಳಿಕ ಮೊಹಮ್ಮದ್ ಶಾರೀಕ್, ಮೊಹಮ್ಮದ್ ಆಜಂ, ಎಂಬವರಿಂದಲೂ ಇದೇ ರೀತಿ ಬ್ಯಾಂಕ್ ಅಕೌಂಟ್ ಮಾಡಿಸಿಕೊಂಡಿದ್ದ. ಈ ಬ್ಯಾಂಕ್ ಖಾತೆಗಳಿಗೆ ಹಣ ವರ್ಗಾವಣೆ ಮಾಡಿಸಿ ಶೋಯೆಬ್ ವಂಚಿಸುತ್ತಿದ್ದ. ಇತರ ಆರೋಪಿಗಳು ಹೆಚ್ಚಿನ ಹಣ ಗಳಿಸುವ ಉದ್ದೇಶದಿಂದ ಬ್ಯಾಂಕ್ ಖಾತೆಗಳನ್ನು ಮಾರಾಟ ಮಾಡಿರುವುದು ತನಿಖೆಯಿಂದ ತಿಳಿದುಬಂದಿರುತ್ತದೆ. ಆದ್ದರಿಂದ ಈ ಐವರನ್ನು ಪೊಲೀಸರು ಬಂಧಿಸಿ ಪ್ರಕರಣ ದಾಖಲಿಸಿದ್ದಾರೆ.