ಮಂಗಳೂರು: ಪ್ರಜ್ವಲ್ ಫಿಲಂಸ್ ನಿರ್ಮಾಣದ ಕೀರ್ತನ್ ಭಂಡಾರಿ ರಚಿಸಿ ನಿರ್ದೇಶಿಸುತ್ತಿರುವ “ಗಜಾನನ ಕ್ರಿಕೆಟರ್ಸ್” ತುಳು ಚಿತ್ರದ ಶೀರ್ಷಿಕೆ ಅನಾವರಣ ಕಾರ್ಯಕ್ರಮ ಸೋಮವಾರ ಸಂಜೆ ಲಾಲ್ ಭಾಗ್ ನಲ್ಲಿರುವ ಖಾಸಗಿ ಹೋಟೆಲ್ ನಲ್ಲಿ ನಡೆಯಿತು. “ಚಿತ್ರರಂಗದ ಇತಿಹಾಸದಲ್ಲೇ ಮೊಟ್ಟಮೊದಲ ಬಾರಿಗೆ ಅಂಡರ್ ಆರ್ಮ್ ಕ್ರಿಕೆಟ್ ಜಗತ್ತನ್ನು ತೆರೆದಿಡುವಂತಹ ಪ್ರಯತ್ನವನ್ನು ಈ ಚಿತ್ರತಂಡ ಮಾಡುತ್ತಿದ್ದು ಚಿತ್ರವು ಹಾಸ್ಯಮಯ ಕಥಾಹಂದರವನ್ನು ಹೊಂದಿದ್ದು ಕುಟುಂಬ ಸಮೇತ ನೋಡುವಂತಹ ಚಿತ್ರ ಇದಾಗಿರುತ್ತದೆ, ಕ್ರಿಕೆಟ್ ಪ್ರೇಮಿಗಳಿಗೆ ಮನೋರಂಜನೆ ನೀಡುವಂತಹ ಹಲವಾರು ಸನ್ನಿವೇಶಗಳು ಚಿತ್ರದಲ್ಲಿದೆ ಎಂದು ಹಾಗೂ ಚಿತ್ರದ ಚಿತ್ರೀಕರಣವು ಮೇ 18ರಿಂದ ಮಂಗಳೂರಿನಾದ್ಯಂತ ನಡೆಯಲಿದ್ದು ಅತೀ ಶೀಘ್ರದಲ್ಲಿ ಬೆಳ್ಳಿತರೆಗೆ ಬರಲಿದೆ. ನಾನು ಚಿತ್ರದ ಕಥೆಯನ್ನು ಒಪ್ಪಿಕೊಂಡು ಅದರ ಭಾಗವಾಗಿದ್ದೇನೆ” ಎಂದು ತುಳು ರಂಗಭೂಮಿಯ ಹಿರಿಯ ನಟ ಭೋಜರಾಜ್ ವಾಮಂಜೂರ್ ಹೇಳಿದರು. “ಚಿತ್ರದ ನಾಯಕ ನಟನಾಗಿ ವಿನೀತ್ ಕುಮಾರ್ ನಟಿಸುತ್ತಿದ್ದು ಇವರಿಗೆ ನಾಯಕಿಯರಾಗಿ ಅನ್ವಿತಾ ಸಾಗರ್ ಹಾಗೂ ಸಮತ ಅಮೀನ್ ಜೊತೆಯಾಗಲಿದ್ದಾರೆ, ತಾರಾಗಣದಲ್ಲಿ ನವೀನ್ ಡಿ ಪಡೀಲ್, ಅರವಿಂದ್ ಬೋಳಾರ್, ಭೋಜರಾಜ ವಾಮಂಜೂರು, ಪ್ರಕಾಶ್ ತುಮಿನಾಡು, ದೀಪಕ್ ರೈ, ಉಮೇಶ್ ಮಿಜಾರ್, ಸಂದೀಪ್ ಶೆಟ್ಟಿ ಮಾಣಿಬೆಟ್ಟು ಕಾಣಿಸಿಕೊಳ್ಳಲಿದ್ದಾರೆ, ಪ್ರಸನ್ನ ಶೆಟ್ಟಿ ಬೈಲೂರು ಚಿತ್ರಕ್ಕೆ ಸಂಭಾಷಣೆ ಬರೆದಿದ್ದಾರೆ, ಮಾಡಲಿಂಗ್ ಕ್ಷೇತ್ರದಲ್ಲಿ ಖ್ಯಾತಿ ಪಡೆದಿರುವ 2018ರ ಮಿಸ್ಟರ್ ದುಬೈ ಕಿರೀಟ ಮುಡಿಗೇರಿಸಿಕೊಂಡಿರುವ ಪ್ರಜ್ವಲ್ ಶೆಟ್ಟಿ ಅವರು ಮೊಟ್ಟ ಮೊದಲ ಬಾರಿಗೆ ಖಳನಾಯಕರಾಗಿ ಚಿತ್ರದಲ್ಲಿ ಬಣ್ಣಹಚ್ಚಲಿದ್ದಾರೆ” ಎಂದು ಚಿತ್ರ ನಿರ್ದೇಶಕ ಕೀರ್ತನ್ ಭಂಡಾರಿ ಮಾಹಿತಿ ನೀಡಿದರು. ಚಾರ್ಲಿ 777, ಒಂದು ಮೊಟ್ಟೆಯ ಕಥೆ, ಗಿರಿ ಗಿಟ್ ಹಾಗೂ ಹಲವಾರು ಕನ್ನಡ ಮತ್ತು ತುಳು ಚಿತ್ರಗಳಿಗೆ ಸಾಹಿತ್ಯ ಬರೆದಿರುವ ಕೀರ್ತನ್ ಭಂಡಾರಿ ಅವರು ಮೊದಲ ಬಾರಿಗೆ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ, ಚಿತ್ರದಲ್ಲಿ 5 ಹಾಡುಗಳಿದ್ದು ಸೃಜನ್ ಕುಮಾರ್ ತೋನ್ಸೆ ಸಂಗೀತ ಸಂಯೋಜನೆ ಮಾಡುತ್ತಿದ್ದು ಚಿತ್ರಕ್ಕೆ ನಿರಂಜನ್ ದಾಸ್ ಛಾಯಾಗ್ರಹಣ ಇರಲಿದೆ.