ಕಾರವಾರ: ಸಮಸ್ಯೆಯನ್ನು ಹೇಳಿಕೊಂಡ ಬಂದ ವಿವಾಹಿತ ಮಹಿಳೆಯ ಮೇಲೆಯೇ ಕಣ್ಣಾಕಿದ ದೈವ ನರ್ತಕ ಆಕೆಯನ್ನು ಮದುವೆ ಆಗೋದಾಗಿ ಹೇಳಿದ್ದು ವೈರಲ್ ಆಗಿದ್ದು ಹಲವು ಅನುಮಾನಗಳಿಗೆ ಕಾರಣವಾಗಿದೆ.
ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ಅಂಬಾರಕೊಡ್ಲ ಗ್ರಾಮದಲ್ಲಿ ದೈವ ನರ್ತಕ ಚಂದ್ರಹಾಸ್ ಮಹಿಳೆಗೆ ಮೋಸ ಮಾಡಲು ಮುಂದಾಗಿದ್ದಾನೆ ಎನ್ನಲಾಗಿದೆ. ಅಂಬಾರಕೊಡ್ಲದಲ್ಲಿ ದೇವಸ್ಥಾನ ನಿರ್ಮಿಸಿ ಕಾಳಿ, ದುರ್ಗೆ, ಅರ್ಧನಾರೀಶ್ವರ ದೈವ ಮೈಮೇಲೆ ಬರುತ್ತದೆ ಎಂದು ಜನರನ್ನು ನಂಬಿಸಿದ್ದ. ಇದನ್ನು ನಂಬಿದ್ದ ಜನರು ಇಲ್ಲಿಗೆ ಬಂದು ಸಮಸ್ಯೆ ಹೇಳಿಕೊಳ್ಳುತ್ತಿದ್ದರು ಎನ್ನಲಾಗಿದೆ. ಅದರಂತೆ ಬೆಳಗಾವಿ ಮೂಲದ ಮಹಿಳೆಯೋರ್ವರು ತನ್ನ ಕಷ್ಟ ಪರಿಹಾರಕ್ಕಾಗಿ ದೈವ ನರ್ತಕ ಬಳಿ ಬಂದಿದ್ದರು. ಸಮಸ್ಯೆ ಹೇಳಿಕೊಂಡ ಮಹಿಳೆಯನ್ನ ತಾನೇ ವರಿಸುವುದಾಗಿ ಈ ದೈವ ನರ್ತಕ ಪಾತ್ರಿ ಚಂದ್ರಹಾಸ್ ಬಹಿರಂಗವಾಗಿಯೇ ವಾಗ್ದಾನ ಮಾಡಿದ್ದಾನೆ. ಮಾತ್ರವಲ್ಲ, ಇತ್ತೀಚೆಗೆ ಭಾರೀ ಸದ್ದು ಮಾಡಿದ ‘ಕಾಂತಾರ’ ಚಿತ್ರದ ಸ್ಟೈಲ್‌ನಲ್ಲಿ ‘ಈ ಬಾಲಕಿಯನ್ನ ಈ ಬಾಲಕ ಮದುಗೆ ಆಗ್ತಾನೆ’ ಎಂದು ದೈವ ನರ್ತಕ ಪಾತ್ರಿ ಹೇಳಿದ್ದಾನೆ. ಈವತ್ತಿನಿಂದ ಈ ಬಾಲಕಿ ನನ್ನ ಅರ್ಧಾಂಗಿಯಾಗಿ, ಅರ್ಧನಾರೇಶ್ವರಿಯಾಗಿ ನನ್ನ ಹೃದಯದಲ್ಲಿ ನೆಲೆಸುತ್ತಾಳೆ ಎಂದು ಹೇಳಿದ ವಿಡಿಯೋ ವೈರಲ್ ಆಗಿದೆ. ಅಲ್ಲದೇ, ಇಂದು ಅಥವಾ ನಾಳೆ ಧರ್ಮಸ್ಥಳ, ಮಂತ್ರಾಲಯ, ಇದೇ ಸ್ಥಳದಲ್ಲಿ ಈ ಬಾಲಕಿ ಕೊರಳಿಗೆ ಈ ಬಾಲಕನ ಕೈಯಿಂದ ತಾಳಿ ಬೀಳುತ್ತೆ. ಇದು ಸತ್ಯ, ಸತ್ಯ ಎಂದ ದೈವ ನರ್ತಕ, ದೇವತಾ ಕಾರ್ಯದಲ್ಲಿ ಪಂಜೆಯನ್ನುಟ್ಟು ಮೈಮೇಲೆ ಅರಿಶಿನ ಚೆಲ್ಲಿಕೊಳ್ಳುತ್ತ, ಜೋರಾಗಿ ಕೂಗಿದ್ದಾನೆ ನರ್ತಕ. ಇದೀಗ ದೈವ ನರ್ತಕನ ಈ ವಿಡಿಯೋ ಹಲವು ಅನಮಾನಗಳನ್ನು ಹುಟ್ಟುಹಾಕಿದ್ದು, ಸಮಸ್ಯೆ ಹೇಳಿಕೊಂಡು ಬಂದ ಮಹಿಳೆಯನ್ನೇ ಯಾಮರಿಸಲು ನೋಡಿದ್ದಾನೆ.